ADVERTISEMENT

ಯುವತಿ ಪತ್ತೆ ಹಚ್ಚಿ, ಜನರಿಗೆ ಸತ್ಯ ತಿಳಿಸಲಿ: ಸತೀಶ ಜಾರಕಿಹೊಳಿ

ಸತೀಶ ಜಾರಕಿಹೊಳಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 13:48 IST
Last Updated 28 ಮಾರ್ಚ್ 2021, 13:48 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣದಿಂದಾಗಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ಲಸ್‌ ಆಗುವುದಿಲ್ಲ. ಬಿಜೆಪಿಗೆ ಮೈನಸ್‌ ಕೂಡ ಆಗುವುದಿಲ್ಲ. ಎರಡೂ ಪಕ್ಷಗಳಲ್ಲೂ ಅವರವರದೆ ಆದ ಕಾರ್ಯಕರ್ತರು ಇದ್ದಾರೆ. ಅವರು ಬೆಂಬಲಿಸುತ್ತಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿ.ಡಿ. ಕೇಸ್ ಬಗ್ಗೆ ಪೊಲೀಸರು ತನಿಖೆ ನಡೆಸಿ ಹೇಳುವವರೆಗೂ ನಾವು ಏನನ್ನೂ ಹೇಳಲಾಗುವುದಿಲ್ಲ. ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯದ ಜನರೂ ಬೇಸತ್ತಿದ್ದಾರೆ. ದೃಶ್ಯ ಮಾಧ್ಯಮದಲ್ಲಿ ಬೇರೆ ಸುದ್ದಿಗಳೇ ಇಲ್ಲ. ಡಬಲ್ ಟ್ವಿಸ್ಟ್, ತ್ರಿಬಲ್ ಟ್ವಿಸ್ಟ್ ಎಂದು ತೋರುತ್ತಿದ್ದಾರೆ. ಈ ಪ್ರಕರಣಕ್ಕೆ ಆ ಯುವತಿಯ ಹೇಳಿಕೆ ಪ್ರಮುಖ. ಆದಷ್ಟು ಬೇಗ ಪೊಲೀಸರು ಯುವತಿ ಪತ್ತೆ ಹಚ್ಚಬೇಕು. ಸತ್ಯವನ್ನು ಜನರಿಗೆ ತಿಳಿಸಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್‍ನವರಾದ ನಮಗೂ, ರಮೇಶ ಜಾರಕಿಹೊಳಿ ಅಭಿಮಾನಿಗಳ ಪ್ರತಿಭಟನೆಗೂ ಸಂಬಂಧವಿಲ್ಲ. ಬೆಳಗಾವಿಯಲ್ಲಿ ರಮೇಶ ಬೆಂಬಲಿಗರು, ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಬೆಂಬಲಿಗರು ಪ್ರತಿಭಟನೆ ಮಾಡ್ತಿದ್ದಾರೆ. ಇದರಿಂದ ಇಲ್ಲಿಯ ಚುನಾವಣೆ ಮೇಲೆ ಏನು ಪರಿಣಾಮ ಬೀರುವುದಿಲ್ಲ. ಸಿ.ಡಿ. ಪ್ರಕರಣದಲ್ಲಿ ಶಿವಕುಮಾರ್ ಪಾತ್ರದ ಬಗ್ಗೆ ಎಸ್ಐಟಿ ತನಿಖೆಯಾದ ಬಳಿಕ ಗೊತ್ತಾಗಲಿದೆ’ ಎಂದರು.

ADVERTISEMENT

‘ಕ್ಷೇತ್ರದ ಜನರು ಅವಕಾಶ ಕೊಟ್ಟು ನೋಡಬೇಕು. ವಿಭಿನ್ನ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.