ADVERTISEMENT

ಶೆಟ್ಟರ್‌ ಹೇಳಿಕೆಗೆ ಸತೀಶ ತಿರುಗೇಟು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 10:46 IST
Last Updated 14 ಏಪ್ರಿಲ್ 2021, 10:46 IST

ಬೆಳಗಾವಿ: ‘ಶಾಸಕರೂ ಆಗಿರುವ ಕಾಂಗ್ರೆಸ್ ಅಭ್ಯರ್ಥಿಯು ವಿಧಾನಮಂಡಲ ಅಧಿವೇಶನದಲ್ಲಿ ಧ್ವನಿ ಎತ್ತುವ ಕೆಲಸ ಮಾಡಿಲ್ಲ. ಇನ್ನು ಲೋಕಸಭೆಯಲ್ಲಿ ಏನು ಮಾಡುವರು?’ ಎಂಬ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿಕೆಗೆ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.

ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶೆಟ್ಟರ್ ಅವರು ಹೇಳುತ್ತಿರುವ ಮಾತುಗಳಲ್ಲಿ ಸತ್ಯವಿದೆ. ಆದರೆ, ಮಾತನಾಡುವುದೇ ಸಾಧನೆಯಲ್ಲ. ಬಿಜೆಪಿಯವರು ಮಾತನಾಡುವುದನ್ನೇ ಸಾಧನೆ ಎಂದುಕೊಂಡಿದ್ದಾರೆ. ಅದು ನಿಜವೂ ಹೌದು, ಭಾಷಣ ಮಾಡುವುದರಲ್ಲಿ ಅವರು ನಿಸ್ಸೀಮರು’ ಎಂದು ಟಾಂಗ್ ಕೊಟ್ಟರು.

‘ವಿಧಾನಮಂಡಲ ಅಧಿವೇಶನದಲ್ಲಿ ಮೂರು ಗಂಟೆಯವರೆಗೂ ಮಾತನಾಡಿ ಮೂರು ಗ್ಲಾಸ್ ನೀರು ಕುಡಿಯುತ್ತಾರೆ. ಆದರೆ, ಅವರು ಸಾಮಾನ್ಯ ಜನರ ಸಮಸ್ಯೆ ಆಲಿಸುವುದನ್ನು ನಾನು ಕಂಡಿಲ್ಲ. ಅವರಂತೆ ಭಾಷಣ ಮಾಡದೆ ಅವರಿಗಿಂತ ಹೆಚ್ಚು ಕೆಲಸ ನಿರ್ವಹಿಸಿದ್ದೇನೆ. ಆ ತೃಪ್ತಿ ನನಗಿದೆ’ ಎಂದರು.

ADVERTISEMENT

ಅರಬಾವಿ ಕ್ಷೇತ್ರದಲ್ಲಿ ಬಿಜೆಪಿ ಪರ ಬಾಲಚಂದ್ರ ಜಾರಕಿಹೊಳಿ ಪ್ರಚಾರ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ. ಇದರಿಂದ ನಮಗೇನೂ ತೊಂದರೆ ಆಗುವುದಿಲ್ಲ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಅಲ್ಲಿಯೂ ನಮ್ಮದೆ ಮತ ಬ್ಯಾಂಕ್ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.