ADVERTISEMENT

ಬಿಜೆಪಿ ಪ್ರಮುಖರ ಸಭೆ; ಸಂಚಲನ ಮೂಡಿಸಿದ ಸಂತೋಷ್ ಪ್ರಕರಣ

ಭಿನ್ನಮತ ಬಿಡಿ: ನಾಯಕರ ತಾಕೀತು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 15:33 IST
Last Updated 12 ಏಪ್ರಿಲ್ 2022, 15:33 IST
   

ಬೆಳಗಾವಿ: ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ ಅವರ ಆತ್ಮಹತ್ಯೆ ಪ್ರಕರಣವು, ಇಲ್ಲಿ ಬಿಜೆಪಿ ಸಂಘಟನೆಗಾಗಿ ನಡೆದ ಪ್ರಮುಖರ ಸಭೆಯಲ್ಲಿ ಸಂಚಲನ ಸೃಷ್ಟಿಸಿತು. ಮಧ್ಯಾಹ್ನದ ಬಳಿಕ ಚರ್ಚೆಯ ದಿಕ್ಕನ್ನೆ ಬದಲಿಸಿತು.

ಸಮನ್ವಯ ಸಮಿತಿ ಸಭೆ ನಡೆಯುವಾಗಲೇ ಬಂದ ಸುದ್ದಿಯಿಂದ ಮುಖಂಡರು ಕೆಲ ಸಮಯ ವಿಚಲಿತರಾದರು. ಸಂಭ್ರಮವಿದ್ದ ಸ್ಥಳದಲ್ಲಿ ಮಂಕು ಕವಿಯಿತು. ಸ್ಥಳೀಯ ಸಮಸ್ಯೆಗಳ ಬಗೆಗಿನ ಚರ್ಚೆ ಹಿನ್ನೆಲೆಗೆ ಸರಿದು ಆತ್ಮಹತ್ಯೆ ಪ್ರಕರಣದ ಚರ್ಚೆ ಮುನ್ನಲೆಗೆ ಬಂದಿತು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ ಪ್ರಕರಣದ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ, ‘ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು, ಮನಸ್ತಾಪಗಳಿಗೆ ಜಾಗವಿಲ್ಲ. ಬಣ ರಾಜಕೀಯಕ್ಕೂ ಅವಕಾಶವಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಪ್ಲಸ್‌ ಸ್ಥಾನಗಳನ್ನು ಗೆದ್ದು ಮತ್ತೆ ಅದಿಕಾರಕ್ಕೆ ಬರಬೇಕು ಎನ್ನುವ ಗುರಿಯನ್ನು ಹೈಕಮಾಂಡ್ ನೀಡಿದೆ. ಜಿಲ್ಲೆಯಲ್ಲಿ 15 ಸ್ಥಾನಗಳನ್ನಾದರೂ ಗೆಲ್ಲಬೇಕು. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು‘ ಎಂದು ನಾಯಕರು ಸೂಚಿಸಿದ್ದಾರೆ.

ADVERTISEMENT

ಒಗ್ಗಟ್ಟಾಗಿ ಹೆಜ್ಜೆ ಹಾಕಿ:

ಪಕ್ಷದ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹಾಗೂ ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲೆಯ ಶಾಸಕರು, ಸಂಸದರು, ಮಾಜಿ ಶಾಸಕರು, ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ, ಪಕ್ಷದ ಏಳಿಗೆಯಷ್ಟೆ ಎಲ್ಲರ ಗುರಿಯಾಗಬೇಕು. ಒಗ್ಗಟ್ಟಾಗಿ ಹೆಜ್ಜೆ ಹಾಕಬೇಕು ಎಂದು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

‘ಹಿಜಾಬ್ ವಿಷಯದಲ್ಲಿ ನ್ಯಾಯಾಲಯದ ತೀರ್ಪು ಸರ್ಕಾರದ ಪರ ಬಂತು. ಇದರಿಂದ ಪಕ್ಷಕ್ಕೂ ನೆರವಾಯಿತು. ಆದರೆ, ಬಳಿಕ ಒಂದು ಸಮಾಜದ ವರ್ತಕರಿಗೆ ಬಹಿಷ್ಕಾರ ಹಾಕುತ್ತಿರುವ ಘಟನೆಗಳು ಹಾಗೂ ಸೌಹಾರ್ದ ಕೆಡಿಸುವ ಬೆಳವಣಿಗೆಗಳು ನಡೆದಿರುವುದು ಸರಿಯಲ್ಲ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಬಹುತೇಕರು ಒತ್ತಾಯಿಸಿದರು. ಯಡಿಯೂರಪ್ಪ ಸಹ ದನಿಗೂಡಿಸಿದರು ಎಂದು ತಿಳಿದುಬಂದಿದೆ.

ಪ್ರತ್ಯೇಕವಾಗಿ ಚರ್ಚೆ:

ಸಮನ್ವಯ ಸಮಿತಿ ಸಭೆ ಬಳಿಕ ಅರುಣ್‌ ಸಿಂಗ್, ಸಚಿವ ಉಮೇಶ ಕತ್ತಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಆನಂದ ಮಾಮನಿ, ಮಹದೇವಪ್ಪ ಯಾದವಾಡ, ಮಹಾಂತೇಶ ದೌಡ್ಡಗೌಡರ, ರಾಜೀವ ಮೊದಲಾದವರ ಜೊತೆ ಪ್ರತ್ಯೇಕವಾಗಿ ಚರ್ಚಿಸಿದರು.

ಮರಾಠಾ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿ ಹಾಗೂ ಬೀದರ್ ಜಿಲ್ಲೆಯಲ್ಲಿ ಆ ಸಮುದಾಯಕ್ಕೆ ಆದ್ಯತೆ ಕೊಡಬೇಕು. ಜಿಲ್ಲೆಯಲ್ಲೂ ಆ ಮತದಾರರೆ ನಿರ್ಣಾಯಕವಾಗಿರುವ ಕ್ಷೇತ್ರಗಳಿವೆ. ಅಲ್ಲಿ ಪಕ್ಷದಲ್ಲಿರುವ ಆ ಸಮಾಜದವರಿಗೆ ಟಿಕೆಟ್ ನೀಡಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಕೋರಿದರು ಎಂದು ತಿಳಿದುಬಂದಿದೆ.

ಜಿಲ್ಲಾ ವಿಭಜನೆಯ ವಿಚಾರ ಪ್ರಸ್ತಾಪವಾಯಿತು. ‘ವಿಭಜನೆ ಕುರಿತು ಸಚಿವ ಉಮೇಶ ಕತ್ತಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಇದು ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸಿ ಸಚಿವರಿಗೆ ಸ್ಪಷ್ಟ ಸೂಚನೆ ಕೊಡಬೇಕು’ ಎಂದು ಕೋರಿದರು ಎನ್ನಲಾಗಿದೆ. ರಮೇಶ ಸಭೆಯ ನಡುವೆಯೇ ಹೊರನಡೆದಿದ್ದು ಚರ್ಚೆಗೆ ಗ್ರಾಸವಾಯಿತು.

ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಬಿಸಿಯೂ ಸಭೆಗೆ ತಟ್ಟಿತು.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.