
ಬೆಳಗಾವಿ ಶನಿವಾರ ಹಮ್ಮಿಕೊಂಡ ‘ಸ್ವಾಸ್ಥ್ಯ ಭಾರತ– ಶ್ರೇಷ್ಠ ಭಾರತ: ಯುವ ಶುದ್ಧಿ ಅಭಿಯಾನ’ ಹಾಗೂ ನಶಾಮುಕ್ತ ಭಾರತ, ನಶಾಮುಕ್ತ ಕರ್ನಾಟಕ, ನಶಾಮುಕ್ತ ಕ್ಯಾಂಪಸ್ ಮತ್ತು ಅಂಗದಾನ ಜಾಗೃತಿ ಅಭಿಯಾನಕ್ಕೆ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡಿದರು
ಬೆಳಗಾವಿ: ‘ಮಾದಕ ವಸ್ತುಗಳ ವ್ಯಸನ ಬಹುದೊಡ್ಡ ಸಮಸ್ಯೆಯಾಗಿ ದೇಶವನ್ನು ಕಾಡುತ್ತಿದೆ. ನಮ್ಮ ಯುವಶಕ್ತಿಯನ್ನು ಕಸಿಯುತ್ತಿರುವ ಈ ವ್ಯಸನ ಶಾಲೆಗಳನ್ನೂ ಆಕ್ರಮಿಸಿಕೊಂಡಿರುವುದು ಕಳವಳಕಾರಿ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಳಗಾವಿ ಜಿಲ್ಲಾ ವ್ಯಾಪ್ತಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಸಂಘ, ದಿಶಾಭೋದ್ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸ್ವಾಸ್ಥ್ಯ ಭಾರತ– ಶ್ರೇಷ್ಠ ಭಾರತ: ಯುವ ಶುದ್ಧಿ ಅಭಿಯಾನ’ ಹಾಗೂ ನಶಾಮುಕ್ತ ಭಾರತ, ನಶಾಮುಕ್ತ ಕರ್ನಾಟಕ, ನಶಾಮುಕ್ತ ಕ್ಯಾಂಪಸ್ ಮತ್ತು ಅಂಗದಾನ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
‘ನಶೆಯ ಪದಾರ್ಥಗಳು ಮಕ್ಕಳು ತಿನ್ನುವ ತಿಂಡಿಗಳಲ್ಲಿ ಗೊತ್ತೇ ಆಗದಂತೆ ಸೇರ್ಪಡೆಯಾಗುತ್ತಿವೆ. ಮಕ್ಕಳಿಗೆ ಚಟವಾಗಲಿ ಎನ್ನುವ ಕಾರಣಕ್ಕೆ ಮಾದಕ ಅಂಶವಿರುವ ಪದಾರ್ಥಗಳನ್ನು ತಿಂಡಿಗಳಲ್ಲಿ ಬೆರೆಸಲಾಗುತ್ತಿದೆ. ಹೀಗಾಗಿ ಪೋಷಕರು, ಶಿಕ್ಷಕರು ಬಹಳ ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ. ಮಾತನಾಡಿ, ‘ಯುವಶಕ್ತಿಯನ್ನು ಕುಂದಿಸುತ್ತಿರುವ ಮಾದಕ ವಸ್ತುಗಳ ಹಾವಳಿಯನ್ನು ನಮ್ಮ ವಿಶ್ವವಿದ್ಯಾಲಯ ಸಹಿಸುವುದಿಲ್ಲ. ವಿದ್ಯಾರ್ಥಿಗಳನ್ನು ಈ ದಾಳಿಯಿಂದ ರಕ್ಷಿಸಲು ನಾವು ನಿರಂತರ ಮತ್ತು ಬಹಳ ಗಂಭೀರ ಹೆಜ್ಜೆಗಳನ್ನು ಇಟ್ಟಿದ್ದೇವೆ’ ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಶಿವಯೋಗೀಶ್ವರ ಸಾಧು ಸಂಸ್ಥಾನ ಮಾಠ, ಇಂಚಲ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ದಿಶಾಬೋಧ್ ಫೌಂಡೇಶನ್‌ನ ಕಾಂತಿ ಶೆಟ್ಟಿ ಮಾತನಾಡಿದರು. ಶಾಸಕ ಆಸಿಫ್ ಸೇಠ್ ಅಧ್ಯಕ್ಷತೆ ವಹಿಸಿದ್ದರು. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊದ ವಿಕಾಸ್ ಸಿಂಗ್, ದಿಶಾಬೋಧ್ ಫೌಂಡೇಶನ್‌ನ ಎ.ಡಿ. ಧ್ರುವಕುಮಾರ್, ಡಾ.ಸಂದೀಪ್ ಪಟ್ಟಣಶೆಟ್ಟಿ, ಡಾ.ವಿಜಯಕುಮಾರ ಲಮಾಣಿ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂದೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಈಶ್ವರ ಗಡಾದ, ಉಪ ಔಷಧ ನಿಯಂತ್ರಕ ಡಾ.ನಾಗರಾಜ, ಎಸ್.ಪಿ.ಕೆ. ರಾಮರಾಜನ್, ಬಿಮ್ಸ್ ನಿರ್ದೇಶಕ ಡಾ.ಅಶೋಕ್ ಕುಮಾರ್ ಶೆಟ್ಟಿ ಅನೇಕರು ಪಾಲ್ಗೊಂಡರು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ವಾಕಥಾನ್ ಶ್ರೀಕೃಷ್ಣದೇವರಾಯ ವೃತ್ತ, ರಾಣಿ ಚನ್ನಮ್ಮ ವೃತ್ತದ ಮೂಲಕ ಹಾಯ್ದು ಸರ್ದಾರ್ ಮೈದಾನದಲ್ಲಿ ಕೊನೆಗೊಂಡಿತು. ಸುಮಾರು 7 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗಿಯಾಗಿದ್ದರು.
ಬೆಳಗಾವಿ ಶನಿವಾರ ಹಮ್ಮಿಕೊಂಡ ‘ಸ್ವಾಸ್ಥ್ಯ ಭಾರತ– ಶ್ರೇಷ್ಠ ಭಾರತ: ಯುವ ಶುದ್ಧಿ ಅಭಿಯಾನ’ ಹಾಗೂ ನಶಾಮುಕ್ತ ಭಾರತ, ನಶಾಮುಕ್ತ ಕರ್ನಾಟಕ, ನಶಾಮುಕ್ತ ಕ್ಯಾಂಪಸ್ ಮತ್ತು ಅಂಗದಾನ ಜಾಗೃತಿ ಅಭಿಯಾನದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡರು
ನಶಾಮುಕ್ತ ಕರ್ನಾಟಕ ಕೇವಲ ಸರ್ಕಾರದ ಕೆಲಸವಲ್ಲ. ನಿಮ್ಮೆಲ್ಲರ ಭಾಗವಹಿಸುವಿಕೆ, ಜಾಗೃತಿ ಮತ್ತು ದೃಢ ಸಂಕಲ್ಪದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯಸತೀಶ ಜಾರಕಿಹೊಳಿ, ಸಚಿವ, ಜಿಲ್ಲಾ ಉಸ್ತುವಾರಿ
ಇಲ್ಲಿಯವರೆಗೆ 11 ಜಿಲ್ಲೆಗಳಲ್ಲಿ ನಶಾಮುಕ್ತ ಕ್ಯಾಂಪಸ್ ಹಾಗೂ ಅಂಗಾಂಗ ದಾನ ಅಭಿಯಾನ ನಡೆಸಲಾಗಿದೆ. 60 ಸಾವಿರ ವಿದ್ಯಾರ್ಥಿಗಳು ಈ ನಡಿಗೆಗೆ ಸಾಕ್ಷಿಯಾಗಿದ್ದಾರೆಡಾ.ಭಗವಾನ್ ಬಿ.ಸಿ., ಕುಲಪತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
ದುಷ್ಟರ ಸಹವಾಸದಿಂದ ದುಶ್ಚಟಗಳು ಆವರಿಸಿಕೊಳ್ಳುತ್ತವೆ. ಸ್ನೇಹಿತರನ್ನು ಆರಿಸಿಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಿ. ದಾರಿ ತಪ್ಪಿಸುವವರಿಂದ ದೂರವಿರಿಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ
ತಂಬಾಕು, ಸಾರಾಯಿ, ಗಾಂಜಾದಂತಹ ಮಾದಕ ವಸ್ತುಗಳ ವ್ಯಸನ ನಗರಗಳಿಗೆ ಮಾತ್ರವಲ್ಲ, ಹಳ್ಳಿಗಳನ್ನೂ ಆಕ್ರಮಿಸಿಕೊಂಡಿರುವುದು ದುರಂತಪೂರ್ಣಾನಂದ ಭಾರತಿ ಸ್ವಾಮೀಜಿ, ಶಿವಯೋಗೀಶ್ವರ ಸಾಧು ಸಂಸ್ಥಾನ ಮಾಠ, ಇಂಚಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.