ADVERTISEMENT

ಹುಕ್ಕೇರಿ ವಿದ್ಯುತ್‌ ಸಹಕಾರ ಸಂಘದ ಚುನಾವಣೆ | ಸೋಲಾಗಿದೆ, ಮುಖಭಂಗವಾಗಿಲ್ಲ: ಸತೀಶ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 4:38 IST
Last Updated 1 ಅಕ್ಟೋಬರ್ 2025, 4:38 IST
ಬೆಳಗಾವಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ಪರಿಶೀಲಿಸಿದರು
ಬೆಳಗಾವಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ಪರಿಶೀಲಿಸಿದರು   

ಬೆಳಗಾವಿ: ‘ಸೋಲು– ಗೆಲುವು ಬದುಕಿನಲ್ಲಿ ಸಾಮಾನ್ಯ. ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರ ಸಂಘದಲ್ಲಿ ನಮಗೆ ಸೋಲಾಗಿದೆ. ಆದರೆ, ಇದನ್ನೇ ಮುಖಂಭಂಗ ಎಂದು ಪರಿಗಣಿಸಬೇಕಿಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರಿಂದಲೇ ಈ ಚುನಾವಣೆಗೆ ಹೆಚ್ಚು ಮಹತ್ವ ಬಂದಿದೆ. ಚುನಾವಣೆಯಲ್ಲಿ ಸೋತರೂ ತಳಮಟ್ಟದಲ್ಲಿ ಜನರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದೇವೆ. ಅಲ್ಲಿ ಭವಿಷ್ಯ ಚೆನ್ನಾಗಿರುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೆಟಗರಿ ಪ್ರಕಾರ ಏಳೆಂಟು ಸಾವಿರ ಮತ ಹಾಳಾಗಿವೆ. ಸಹಕಾರ ರಂಗ ನಮಗೆ ಹೊಸದು. ಆದರೂ ಕೂಡ ಹೆಚ್ಚು ಪ್ರಯತ್ನ ಹಾಕಿದ್ದೇವೆ. ನಾವು 12 ಸಾವಿರ ಮತ ಪಡೆದಿದ್ದೆವೆ. ಅವರು 20 ಸಾವಿರ ಪಡೆದಿದ್ದಾರೆ. ನಮ್ಮ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಇನ್ನೂ ಹೆಚ್ಚು ಸಕ್ರಿಯವಾಗಿ ಚುನಾವಣೆ ಮಾಡಬೇಕಿತ್ತು. ಮತದಾರರ ಮನವೊಲಿಸಲು ನಮಗೆ ಆಗಲಿಲ್ಲ’ ಎಂದರು.

‘ಜಾರಕಿಹೊಳಿ ಸಹೋದರರು ಲಿಂಗಾಯತ ವಿರೋಧಿಗಳು ಎಂಬುದು ಸುಳ್ಳು. ಇದು ತಾಲ್ಲೂಕಿಗೆ ಸೀಮಿತವಾದ ಚುನಾವಣೆ. ಜಿಲ್ಲೆ, ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ವಿರೋಧಿಗಳು ಹುಕ್ಕೇರಿಯಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಬೇರೆ ತಾಲ್ಲೂಕಿಗೆ ಅದು ಅನ್ವಯಿಸುವುದಿಲ್ಲ’ ಎಂದರು.

ADVERTISEMENT

‘ರಮೇಶ ಕತ್ತಿ ನಮ್ಮ ಕುಟುಂಬದ ಬಗ್ಗೆ ತೀರ ವೈಯಕ್ತಿಕ ನಿಂದನೆ ಮಾಡಿದ್ದಾರೆ. ಅವರು ತಮ್ಮ ಘನತೆ, ವ್ಯಕ್ತಿತ್ವಕ್ಕೆ ತಕ್ಕಂತೆ ಮಾತಾಡಬೇಕು. ಅವರ ಇಡೀ ಕುಟುಂಬ ರಾಜಕಾರಣದಲ್ಲಿದೆ. ಬಾಯಿ ಇದೆ ಎಂಬ ಕಾರಣಕ್ಕೆ ಏನೇನೋ ಮಾತಾಡಬಾರದು’ ಎಂದೂ ಕಿಡಿ ಕಾರಿದರು.

ಗೋಕಾಕ, ಅರಭಾವಿ ಕ್ಷೇತ್ರಗಳಿಗೆ ನುಗ್ಗುತ್ತೇನೆ ಎಂಬ ರಮೇಶ ಕತ್ತಿ ಮಾತಿಗೆ ಪ್ರತಿಕ್ರಿಯಿಸಿದ ಸಚಿವ, ‘ರಮೇಶ ಕತ್ತಿ ‘ಡೆಡ್‌ಹಾರ್ಸ್’. ಅವರ ರಾಜಕಾರಣ, ವಿಚಾರಗಳು ಹುಕ್ಕೇರಿ ತಾಲ್ಲೂಕಿಗೆ ಮಾತ್ರ ಸಿಮೀತ. ಯಾರು, ಎಲ್ಲಿಗೆ ಬೇಕಾದರೂ ಪ್ರವೇಶ ಮಾಡಬಹುದು’ ಎಂದರು.

ಹುಕ್ಕೇರಿ ಫಲಿತಾಂಶ ಡಿಸಿಸಿ ಬ್ಯಾಂಕ್ ಚುನಾವಣೆ ಮೇಲೆ ಪ್ರಭಾವ ಬೀಡುವುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಾರ್ವತ್ರಿಕ ಚುನಾವಣೆ ಆಗಿದ್ದರೆ ಹಾಗೆ ಅಂದುಕೊಳ್ಳಬಹುದಿತ್ತು’ ಎಂದರು.

ಶಾಸಕರಾದ ಆಸಿಫ್‌ ಸೇಠ್‌, ಬಾಬಾಸಾಹೇಬ್‌ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್‌ ಹಣಮನ್ನವರ ಇತರರು ಇದ್ದರು.

ರಮೇಶ ಕತ್ತಿ ಉತ್ತರ ಕರ್ನಾಟಕ ಪ್ರಭಾವಿ ಆಗಲು ಸಾಧ್ಯವಿಲ್ಲ. ಮನೆಯಲ್ಲಿ ಕುಳಿತರೆ ನಾಯಕ ಆಗುವುದಿಲ್ಲ. ಓಡಾಡಬೇಕು ಜನರ ಕೆಲಸ ಮಾಡಬೇಕು
ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ
‘ಮಾರುಕಟ್ಟೆ ಸಮಸ್ಯೆಗೆ ಶೀಘ್ರ ಪರಿಹಾರ’
‘ಸರ್ಕಾರಿ ಎಪಿಎಂಸಿಗೆ ಭೇಟಿ ನೀಡಿದ್ದೇನೆ. ಇನ್ನೊಂದು ವಾರದಲ್ಲಿ ಜೈ ಕಿಸಾನ್‌ ಖಾಸಗಿ ಮಾರುಕಟ್ಟೆ ವರ್ತಕರ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಸತೀಶ ಜಾರಕಿಹೊಳಿ ತಿಳಿಸಿದರು. ‘ಅವಶ್ಯಕತೆ ಬಿದ್ದರೆ ಹೊಸ ಮಳಿಗೆ ನಿರ್ಮಿಸಲು ನಾವು ತಯಾರಿದ್ದೇವೆ. ಹೀಗಾಗಿ ಯಾವುದೇ ಸಮಸ್ಯೆ ಇದ್ದರೂ ತಮ್ಮ ಗಮನಕ್ಕೆ ತರಬೇಕು’ ಎಂದರು. ಪರಿಶೀಲನೆ ವೇಳೆ ಶಾಸಕರಾದ ಆಸಿಫ್‌ ಸೇಠ್‌ ಬಾಬಾಸಾಹೇಬ ಪಾಟೀಲ್ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಶನ್‌ ಉಪವಿಭಾಗಾಧಿಕಾರಿ ಶ್ರವಣ ನಾಯಿಕ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಶಿಂಧೆ ಎಪಿಎಂಸಿ ಕಾರ್ಯದರ್ಶಿ ಎಪಿಎಂಸಿ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ ಇದ್ದರು.
4ರಂದು ಸಿ.ಎಂ ಆಗಮನ: ಪರಿಶೀಲನೆ
ನಗರದ ಚನ್ನಮ್ಮ ವೃತ್ತದ ಪಕ್ಕದಲ್ಲಿ ₹188 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡಕ್ಕೆ ಅ.4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿರುವ ಕಾರಣ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ಸಿದ್ದತೆ ಪರಿಶೀಲಿಸಿದರು. ಮುಖ್ಯಮಂತ್ರಿ ಆಗಮನದ ಕರಣ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದೂ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.