
ಬೆಳಗಾವಿ: ‘ಡಾ.ಯತೀಂದ್ರ ಸಿದ್ದರಾಮಯ್ಯ ಅಹಿಂದ ನಾಯಕತ್ವದ ಬಗ್ಗೆ ಹೇಳಿದ್ದಾರೆಯೇ ಹೊರತು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಅಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.
‘ತಂದೆ ಸಿದ್ದರಾಮಯ್ಯ ನಂತರ, ಅಹಿಂದ ನಾಯಕತ್ವ ವಹಿಸಿಕೊಳ್ಳಲು ಸಚಿವ ಸತೀಶ ಜಾರಕಿಹೊಳಿ ಸಮರ್ಥರಾಗಿದ್ದಾರೆ’ ಎಂಬ ಯತೀಂದ್ರ ಹೇಳಿಕೆಗೆ, ಇಲ್ಲಿ ಭಾನುವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
‘ಪಕ್ಷವೇ ಬೇರೆ. ಅಹಿಂದ ಸಂಘಟನೆಯೇ ಬೇರೆ. ಸಿ.ಎಂ ಸ್ಥಾನಕ್ಕೂ ಅದಕ್ಕೂ ಸಂಬಂಧವಿಲ್ಲ. ಈ ವಿಚಾರದಲ್ಲಿ ಗೊಂದಲ ನಿರ್ಮಿಸುವ ಅಗತ್ಯವಿಲ್ಲ’ ಎಂದರು.
ಸಚಿವ ಸಂಪುಟ ಪುನರ್‌ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ, ‘ಸಂಪುಟ ಪುನರ್‌ರಚನೆ ಆದಾಗ ಹಳಬರು ಹೋಗಿ, ಹೊಸಬರು ಬರುತ್ತಾರೆ. ಸರ್ಕಾರ ಅಧಿಕಾರಕ್ಕೆ ಬಂದ 30 ತಿಂಗಳ ನಂತರ, ಸಂಪುಟ ಪುನರ್‌ರಚನೆ ಮಾಡಲಾಗುತ್ತದೆ ಎನ್ನಲಾಗಿತ್ತು. ಈಗ ಆ ಚರ್ಚೆ ಅಂತಿಮ ಹಂತಕ್ಕೆ ಬಂದಿರಬೇಕು. ಯಾರನ್ನು ಸಚಿವ ಸ್ಥಾನದಿಂದ ಕೈಬಿಡುತ್ತಾರೆ ಎಂಬ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ಈ ಬಗ್ಗೆ ನಮ್ಮ ಹಂತದಲ್ಲಿ ಚರ್ಚೆಯಾಗಿಲ್ಲ’ ಎಂದು ಹೇಳಿದರು.
ಸಚಿವ ಸ್ಥಾನ ತ್ಯಾಗದ ಬಗ್ಗೆ ಕೃಷ್ಣ ಬೈರೇಗೌಡ ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿದ ಸತೀಶ, ‘ಪಕ್ಷದ ಹೈಕಮಾಂಡ್ ಸೂಚನೆಯನ್ನು ಎಲ್ಲರೂ ಪಾಲಿಸಬೇಕು. ಸಚಿವ ಸ್ಥಾನ ತೊರೆದವರು ಪಕ್ಷದ ಪರವಾಗಿ ಕೆಲಸ ಮಾಡಬೇಕು. ಸಚಿವರಾದವರು ಜನರ ಕೆಲಸ ಮಾಡಬೇಕು’ ಎಂದರು.
‘ಸಂಪುಟದಲ್ಲಿ 34 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಬೇಕಿದೆ. ಅನೇಕ ಹಿರಿಯರು ಆಕಾಂಕ್ಷಿಗಳಾಗಿದ್ದಾರೆ. ಯಾರು ಸಚಿವರಾಗುತ್ತಾರೆ ಎಂದು ನಾವೇ ಹೇಳುವುದು ಕಷ್ಟ. ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಡಿಸೆಂಬರ್ ನಂತರ ನನಗೆ ಶುಕ್ರದೆಸೆ ಆರಂಭವಾಗಲಿದೆ’ ಎಂಬ ಶಾಸಕ ಲಕ್ಷ್ಮಣ ಸವದಿ ಹೇಳಿಕೆಗೆ, ‘ಬಹಳಷ್ಟು ಹಿರಿಯರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಅಂತಿಮವಾಗಿ ಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಕಾದುನೋಡೋಣ’ ಎಂದರು.
‘ಬೆಳಗಾವಿ ಜಿಲ್ಲೆ ದೊಡ್ಡದಿದೆ. ಇದನ್ನು ವಿಭಜಿಸುವಂತೆ ಎಲ್ಲ ಶಾಸಕರೂ ಹೇಳಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.