ADVERTISEMENT

ಸತೀಶ ಜಾರಕಿಹೊಳಿ ಪುತ್ರ, ಪುತ್ರಿ ರಾಜಕೀಯ ಪ್ರವೇಶ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 6:23 IST
Last Updated 16 ಜೂನ್ 2021, 6:23 IST
ಬೆಳಗಾವಿಯಲ್ಲಿ ಮಂಗಳವಾರ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಕಾರ್ಯಕರ್ತರಿಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ವಿತರಿಸಿದರು
ಬೆಳಗಾವಿಯಲ್ಲಿ ಮಂಗಳವಾರ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಕಾರ್ಯಕರ್ತರಿಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ವಿತರಿಸಿದರು   

ಬೆಳಗಾವಿ: ಯಮಕನಮರಡಿ ಕ್ಷೇತ್ರದ ಶಾಸಕರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಮ್ಮ ಪುತ್ರ ರಾಹುಲ್‌ ಜಾರಕಿಹೊಳಿ ಅವರನ್ನು ನಗರದ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ನಡೆದ ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಸಭೆಯಲ್ಲಿ ಪರಿಚಯಿಸಿದರು. ಇದರೊಂದಿಗೆ, ಸಕ್ರಿಯ ರಾಜಕಾರಣಕ್ಕೆ ಪ್ರವೇಶದ ಸಂದೇಶ ರವಾನಿಸಿದರು.

‘ರಾಹುಲ್‌ ಮಂಗಳವಾರದಿಂದಲೇ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ’ ಎಂದು ಸತೀಶ ಪ್ರಕಟಿಸಿದರು.

ರಾಹುಲ್‌ ಅವರನ್ನು ಪಾಲ್ಗೊಂಡಿದ್ದ ಸದಸ್ಯರು ಹಾಗೂ ಮುಖಂಡರು ಸ್ವಾಗತಿಸಿದರು.

ADVERTISEMENT

ತಾವು ನಿರ್ದೇಶಕರಾಗಿರುವ ಸತೀಶ ಶುಗರ್ಸ್ ಲಿಮಿಟೆಡ್ ವತಿಯಿಂದ ಸದಸ್ಯರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳನ್ನು ರಾಹುಲ್‌ ವಿತರಿಸಿದರು.

ಈ ವೇಳೆ ಮಾತನಾಡಿದ ಸತೀಶ, ‘ರಾಜಕೀಯದಲ್ಲಿ ತೊಡಗಿಸಿಕೊಳ್ಳುವವರು ಮೊದಲು ಸಮಾಜ, ಸೇವೆ ಹಾಗೂ ಪಕ್ಷ ಎಂದರೇನು ಎನ್ನುವುದನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ’ ಎಂದರು.

‘ಪುತ್ರ ರಾಹುಲ್‌ ಹಾಗೂ ಪ್ರಿಯಾಂಕಾ ಅಧಿಕೃತವಾಗಿ ಜಿಲ್ಲಾ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪಕ್ಷ ಸಂಘಟನೆ ಮೂಲಕ ಅವರು ಸಾಮರ್ಥ್ಯ ಪ್ರದರ್ಶಿಸಬೇಕು’ ಎಂದು ಹೇಳಿದರು.

‘ಇಬ್ಬರೂ ತಮಗೆ ಅವಕಾಶ ಇರುವಲ್ಲಿ ಹಾಗೂ ಎಲ್ಲಿ ಜನ ಬಯಸುತ್ತಾರೋ ಅಲ್ಲೆಲ್ಲಾ ಹೋಗಿ ಸೇವೆ ಮಾಡಬೇಕು. ಜೊತೆಗೆ ಪಕ್ಷವನ್ನೂ ಬಲಪಡಿಸಬೇಕು. ಹಿರಿಯರು–ಕಿರಿಯರೊಂದಿಗೆ ಬೆರೆತು ಅವರು ಕೊಡುವ ಸಲಹೆ–ಸೂಚನೆಗಳನ್ನು ಪಾಲಿಸಬೇಕು. ತಮ್ಮ ವಿಚಾರಗಳನ್ನು ಅವರಿಗೆ ತಿಳಿಸಬೇಕು. ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಇಬ್ಬರೂ ಮೂರು ತಿಂಗಳ ಹಿಂದೆಯೇ ಅಧಿಕೃತವಾಗಿ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಇಬ್ಬರ ಮೇಲೂ ಸಾಕಷ್ಟು ಜವಾಬ್ದಾರಿ ಇದೆ. ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

‘ಪಕ್ಷ ಸಂಘಟನೆಗಾಗಿ ನಾನು ರಾಜ್ಯದಾದ್ಯಂತ ಸಂಚರಿಸಬೇಕಾಗುತ್ತದೆ. ಹೀಗಾಗಿ, ಪುತ್ರ ಮತ್ತು ಪುತ್ರಿ ಇನ್ಮುಂದೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತಾರೆ. ಕಾರ್ಯಕರ್ತರು ನನಗೆ ತೋರಿಸಿರುವ ಪ್ರೀತಿ, ಅಭಿಮಾನ, ಸಹಕಾರವನ್ನು ಅವರಿಗೂ ನೀಡಬೇಕು. ಅವರಿಂದ ಕೆಲಸ ಪಡೆಯಬೇಕು’ ಎಮದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.