ADVERTISEMENT

ಕೋವಿಡ್‌ ವೆಚ್ಚ, ಲೆಕ್ಕ ಮರೆಮಾಚುತ್ತಿರುವ ಸರ್ಕಾರ:

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 15:57 IST
Last Updated 31 ಜುಲೈ 2020, 15:57 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ    

ಬೆಳಗಾವಿ: ‘ಕೋವಿಡ್‌ ನಿಯಂತ್ರಿಸಲು ಮಾಡಿರುವ ವೆಚ್ಚದ ಬಗ್ಗೆ ಸರ್ಕಾರ ಸರಿಯಾದ ಲೆಕ್ಕ ಕೊಡುತ್ತಿಲ್ಲ. ಮರೆ ಮಾಚುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೆಲವೊಮ್ಮೆ ₹ 4,000 ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ, ಲೆಕ್ಕ ಕೊಡುತ್ತಿಲ್ಲ. ಅಧಿವೇಶನ ಆರಂಭವಾದರೆ ಇದನ್ನೇ ಪ್ರಮುಖವಾಗಿ ಚರ್ಚೆ ಮಾಡುತ್ತೇವೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಅವರನ್ನು ಭೇಟಿಯಾದರೆ ಅದು ಅಡ್ಜಸ್ಟ್‌ಮೆಂಟ್‌ ಅಲ್ಲ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲಸಗಳಿದ್ದಾಗ ಭೇಟಿಯಾಗುವುದು ಸಾಮಾನ್ಯ. ನಾವು ಕೂಡ ಹಲವು ಬಾರಿ ಭೇಟಿಯಾಗಿದ್ದೇವೆ. ರಾತ್ರಿ ಭೇಟಿಯಾದರೇನು? ಹಗಲು ಭೇಟಿಯಾದರೇನು?’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದವರು, ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಸೇರಿಸಿ ಸಚಿವರು ಸಭೆ ಕರೆಯಬೇಕು. ವಾರಕ್ಕೊಮ್ಮೆಯಾದರೂ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಸಚಿವರು ಎಲ್ಲಿಯೂ ಕಾಣಿಸುತ್ತಿಲ್ಲ. ಸಚಿವರನ್ನು ಹುಡುಕಿಕೊಡಿ ಎನ್ನುವ ಅಭಿಯಾನ ಆರಂಭಿಸಿ’ ಎಂದು ಅವರು ಮಾಧ್ಯಮಗಳಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.