ADVERTISEMENT

ಸುರ್ಜೇವಾಲ ಮುಂದೆ ಡಿ.ಕೆ.ಶಿವಕುಮಾರ್‌ ವಿರುದ್ಧ ಧ್ವನಿ ಎತ್ತಿದ ಸತೀಶ ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 15:37 IST
Last Updated 17 ಜನವರಿ 2025, 15:37 IST
<div class="paragraphs"><p>ಬೆಳಗಾವಿಯ ಸಿ.ಪಿ.ಇಡಿ ಮೈದಾನದಲ್ಲಿ ನಡೆಯಲಿರುವ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶದ ಸ್ಥಳವನ್ನು ರಣದೀಪ್‌ ಸಿಂಗ್‌ ಸುರ್ಜೇವಾಲ ಶುಕ್ರವಾರ&nbsp;ವೀಕ್ಷಿಸಿದರು</p><p></p></div>

ಬೆಳಗಾವಿಯ ಸಿ.ಪಿ.ಇಡಿ ಮೈದಾನದಲ್ಲಿ ನಡೆಯಲಿರುವ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶದ ಸ್ಥಳವನ್ನು ರಣದೀಪ್‌ ಸಿಂಗ್‌ ಸುರ್ಜೇವಾಲ ಶುಕ್ರವಾರ ವೀಕ್ಷಿಸಿದರು

   

ಬೆಳಗಾವಿ: ಜಿಲ್ಲಾ ಕಾಂಗ್ರೆಸ್‌ ಭವನ ನಿರ್ಮಾಣದ ‘ಕ್ರೆಡಿಟ್‌’ ಗುದ್ದಾಟ ಬೆಳಗಾವಿಯಲ್ಲಿ ಮತ್ತೆ ಪ್ರತಿಧ್ವನಿಸಿತು. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲೇ, ಸಚಿವ ಸತೀಶ ಜಾರಕಿಹೊಳಿ ಅವರ ಬೆಂಬಲಿಗರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ವಿರುದ್ಧ ಅಸಮಾಧಾನ ಹೊರಹಾಕಿದರು.

ADVERTISEMENT

1924ರ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಜನವರಿ 21ರಂದು ನಡೆಯಲಿರುವ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶದ ಸಿದ್ಧತೆಗಾಗಿ, ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ಕರೆಯಲಾಗಿತ್ತು.

ಸಭೆ ನೇತೃತ್ವ ವಹಿಸಿದ್ದ ರಣದೀಪ್‌ ಸಿಂಗ್‌ ಸುರ್ಜೇವಾಲ, ‘ಎಲ್ಲ ನಾಯಕರೂ ಸಮಾವೇಶದ ಯಶಸ್ಸಿಗೆ ಶ್ರಮಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಇದರಲ್ಲಿ ಸೇರಿಸಬೇಕು’ ಎಂದು ಕರೆಕೊಟ್ಟರು.

ಅವರ ಭಾಷಣಕ್ಕೆ ಅಡ್ಡಿಪಡಿಸಿದ ಪಕ್ಷದ ಮುಖಂಡ ಬಾಬುಲಾಲ ಬಾಗವಾನ್‌, ‘ಬೆಳಗಾವಿಯಲ್ಲಿ ಕಾಂಗ್ರೆಸ್‌ ಭವನ ನಿರ್ಮಿಸಿದ್ದು ಸಚಿವ ಸತೀಶ ಜಾರಕಿಹೊಳಿ. ವಿದ್ಯುತ್‌ ಶುಲ್ಕ ಸೇರಿದಂತೆ ಎಲ್ಲ ರೀತಿಯ ಖರ್ಚು–ವೆಚ್ಚ ನಿರ್ವಹಿಸುವುದು ಅವರೇ. ಇದಕ್ಕೆ ಕಾಂಗ್ರೆಸ್‌ನ ಉಳಿದ ಘಟಾನುಘಟಿ ನಾಯಕರ ಕೊಡುಗೆ ಏನು?’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಸತೀಶ ಜಾರಕಿಹೊಳಿ ಬಿಟ್ಟರೆ, ಪಕ್ಷಕ್ಕಾಗಿ ಯಾವ ನಾಯಕರೂ ಹಣ ಖರ್ಚು ಮಾಡುವುದಿಲ್ಲ. ಈ ಸಭೆಗೆ ಜಿಲ್ಲೆಯ ಶಾಸಕರು ಏಕೆ ಬಂದಿಲ್ಲ’ ಎಂದೂ ಪ್ರಶ್ನಿಸಿದರು. ಅವರೊಂದಿಗೆ ಇತರ ನಾಯಕರೂ ಧ್ವನಿಗೂಡಿಸಿದರು.

‘ಸಮಾವೇಶದ ಕುರಿತು ಚರ್ಚಿಸಲು ಇಲ್ಲಿ ಸೇರಿದ್ದೇವೆ. ಕಾಂಗ್ರೆಸ್‌ ಭವನ ನಿರ್ಮಾಣದ ವಿಚಾರ ಇಲ್ಲಿ ಚರ್ಚಿಸುವುದು ಬೇಡ. ಜಿಲ್ಲೆಯ ಶಾಸಕರೊಂದಿಗೆ ಬೆಳಿಗ್ಗೆಯೇ ಚರ್ಚಿಸಿದ್ದರಿಂದ ಅವರು ಇಲ್ಲಿಗೆ ಬಂದಿಲ್ಲ’ ಎಂದು ಸುರ್ಜೇವಾಲ ಹೇಳಿದರೂ, ಬಾಗವಾನ್‌ ಪಟ್ಟು ಸಡಿಲಿಸಲಿಲ್ಲ. ಆಗ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

'ಸತೀಶ ಜಾರಕಿಹೊಳಿ‌ ಅವರೇ ಕಾಂಗ್ರೆಸ್‌ ಭವನದ ಖರ್ಚು–ವೆಚ್ಚ ನೋಡಿಕೊಳ್ಳುತ್ತಿದ್ದಾರೆ’ ಎಂದು ಸತೀಶ ಬೆಂಬಲಿಗರು ಹೇಳಿದಾಗ, ‘ಸತೀಶ ಖುಷಿಪಡಿಸಲು ನೀವು ಹೀಗೆ ಮಾತನಾಡುತ್ತಿದ್ದೀರಿ’ ಎಂದು ಸುರ್ಜೇವಾಲ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಪಿಸಿಸಿ ಸದಸ್ಯೆ ಆಯೇಷಾ ಸನದಿ, ‘ಸತೀಶ ಜಾರಕಿಹೊಳಿ‌ ಅವರ ಸಲುವಾಗಿ ನಾವು ಜೀವ ಬೇಕಾದರೂ ಕೊಡುತ್ತೇವೆ. ಇಷ್ಟೆಲ್ಲ ಜನರು ಅವರ ಸಲುವಾಗಿ ಬಂದಿದ್ದಾರೆ’ ಎಂದು ಟಾಂಗ್ ಕೊಟ್ಟರು.

ಇಷ್ಟೆಲ್ಲ ಬೆಳವಣಿಗೆ ನಡೆದರೂ ಸತೀಶ ಜಾರಕಿಹೊಳಿ‌ ಸುಮ್ಮನೇ ಕುಳಿತಿದ್ದರು. ಗೊಂದಲ ಬಗೆಹರಿದ ನಂತರ, ಸುರ್ಜೇವಾಲ ತಮ್ಮ ಭಾಷಣ ಮುಂದುವರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.