ADVERTISEMENT

ನನ್ನ ಸ್ಪರ್ಧೆ ಹಿಂದೆ ಸವದಿ ಕೈವಾಡವಿಲ್ಲ: ದಾಶ್ಯಾಳ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 12:35 IST
Last Updated 20 ನವೆಂಬರ್ 2019, 12:35 IST
ಗುರಪ್ಪ ದಾಶ್ಯಾಳ
ಗುರಪ್ಪ ದಾಶ್ಯಾಳ   

ಅಥಣಿ (ಬೆಳಗಾವಿ ಜಿಲ್ಲೆ): ‘ನನ್ನ ಸ್ಪರ್ಧೆ ಹಿಂದೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಪಾತ್ರವಿಲ್ಲ. ರೈತರ ಪರವಾದ ಎಚ್‌.ಡಿ. ಕುಮಾರಸ್ವಾಮಿ ಅವರ ಒಳ್ಳೆಯ ಕೆಲಸಗಳನ್ನು ಮೆಚ್ಚಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದೇನೆ’ ಎಂದು ಜೆಡಿಎಸ್‌ ಅಭ್ಯರ್ಥಿ ಗುರಪ್ಪ ದಾಶ್ಯಾಳ ತಿಳಿಸಿದ್ದಾರೆ.

ಬುಧವಾರ ವಿಡಿಯೊ ಬಿಡುಗಡೆ ಮಾಡಿರುವ ಅವರು, ‘ನನ್ನ ಸ್ಪರ್ಧೆ ಹಿಂದೆ ಸವದಿ ಕೈವಾಡವಿಲ್ಲ. ಕುಮಾರಸ್ವಾಮಿ ಅವರು ಮಾಡಿದ ಸಾಧನೆಗಳನ್ನು ತಿಳಿಸಿ ಜನರಲ್ಲಿ ಮತ ಯಾಚಿಸುತ್ತೇನೆ. ಜೆಡಿಎಸ್‌ ನಾಯಕರು ಕೂಡ ಬೆಂಬಲಿಸಲಿದ್ದಾರೆ’ ಎಂದು ಹೇಳಿದ್ದಾರೆ.

ಜಿಲ್ಲಾ ಪಂಚಾಯ್ತಿ ಬಿಜೆಪಿ ಸದಸ್ಯರಾದ ಅವರು ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ. ನಂತರ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಪ್ರಚಾರವನ್ನೂ ಆರಂಭಿಸಿಲ್ಲ. ಅವರು ಹೈದರಾಬಾದ್‌ಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಸವದಿ ಸೇರಿದಂತೆ ಯಾರ ಮನವೊಲಿಕೆಗೂ ಅವರು ಜಗ್ಗಿಲ್ಲ. ಇದು, ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ADVERTISEMENT

‘ಅವರಿಂದ ಬುಧವಾರ ನಾಮಪತ್ರ ವಾಪಸ್‌ ತೆಗೆಸಲಾಗುವುದು’ ಎಂದು ಸವದಿ ಹೇಳಿದ್ದರು. ಆದರೆ, ದಾಶ್ಯಾಳ ನಾಮಪತ್ರ ವಾಪಸ್‌ ಪಡೆದಿಲ್ಲ. ನಾಮಪತ್ರ ಹಿಂಪಡೆಯಲು ನ. 21 (ಗುರುವಾರ) ಕೊನೆಯ ದಿನವಾಗಿದೆ. ಹೀಗಾಗಿ, ಅವರು ಕಣದಲ್ಲಿ ಉಳಿಯುತ್ತಾರೋ, ಹಿಂದೆ ಸರಿಯುತ್ತಾರೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.