ADVERTISEMENT

‘ಸವಿತಾ ಜಗದೊಳಗೆ ನೀನು ನಿನ್ನೊಳಗೆ ಜಗತ್ತು’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 14:01 IST
Last Updated 19 ಅಕ್ಟೋಬರ್ 2021, 14:01 IST
ಬೆಳಗಾವಿಯಲ್ಲಿ ಲೇಖಕಿ ಜ್ಯೋತಿ ಬದಾಮಿ ವಿರಚಿತ ‘ಸವಿತಾ ಜಗದೊಳಗೆ ನೀನು ನಿನ್ನೊಳಗೆ ಜಗತ್ತು’ ಕೃತಿಯನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಂಬಿಕಾ ಭಾನುವಾರ ಬಿಡುಗಡೆ ಮಾಡಿದರು
ಬೆಳಗಾವಿಯಲ್ಲಿ ಲೇಖಕಿ ಜ್ಯೋತಿ ಬದಾಮಿ ವಿರಚಿತ ‘ಸವಿತಾ ಜಗದೊಳಗೆ ನೀನು ನಿನ್ನೊಳಗೆ ಜಗತ್ತು’ ಕೃತಿಯನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಂಬಿಕಾ ಭಾನುವಾರ ಬಿಡುಗಡೆ ಮಾಡಿದರು   

ಬೆಳಗಾವಿ: ಇಲ್ಲಿನ ಲೇಖಕಿ ಜ್ಯೋತಿ ಬದಾಮಿ ವಿರಚಿತ ‘ಸವಿತಾ ಜಗದೊಳಗೆ ನೀನು ನಿನ್ನೊಳಗೆ ಜಗತ್ತು’ ಕೃತಿಯನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಂಬಿಕಾ ಬಿಡುಗಡೆ ಮಾಡಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಥಾ ನಾಯಕಿ ಸವಿತಾ ಹಾಲಪ್ಪನವರ ತಾಯಿ ಅಕ್ಕಮ್ಮ ಯಾಳಗಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ಸವಿತಾ ತಂದೆ ಲಿ.ಅಂದಾನೆಪ್ಪ ಯಾಳಗಿ ಅವರ ಪುಣ್ಯಸ್ಮರಣೆಯೂ ನಡೆಯಿತು.

ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕಿ ಶೈಲಜಾ ಭಿಂಗೆ ಕೃತಿಯ ಕುರಿತು ಮಾತನಾಡಿದರು. ‘ಸವಿತಾ ಬೆಳಗಾವಿಯ ಮಗಳು. ಈಗ ಜಗದೊಳಗೆ ನೀನು ನಿನ್ನೊಳಗೆ ಜಗತ್ತು ಆಗಿದ್ದಾಳೆ. ಜಗದ ಕಣ್ಣಾಗಿ ಸ್ಮರಣೀಯಳಾಗಿ ನಿಂತಿದ್ದಾಳೆ’ ಎಂದರು.

ADVERTISEMENT

‘ಆರು ವರ್ಷಗಳ ಹಿಂದೆ ಐರ್ಲೆಂಡ್‌ನಲ್ಲಿ ಸವಿತಾ ಗರ್ಭಿಣಿಯಾಗಿದ್ದಾಗ ರಕ್ತಸ್ರಾವದ ಕಾರಣದಿಂದ ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಗರ್ಭಪಾತ ಮಾಡುವಂತೆ ಗೋಗೆರೆದರೂ ವೈದ್ಯರು ಇದು ಕ್ರೈಸ್ತ ಧರ್ಮಕ್ಕೆ ವಿರುದ್ಧವಾಗಿದೆ; ನಾವಿಲ್ಲಿ ಗರ್ಭಪಾತ ಮಾಡುವಂತಿಲ್ಲ ಎಂಬ ಕಾರಣ ಹೇಳಿದ್ದಾರೆ. ಇದರಿಂದ, ಕೆಲವೇ ದಿನಗಳಲ್ಲಿ ಸವಿತಾ ದೇಹದಲ್ಲಿ ನಂಜೇರಿ ಕೊನೆಯುಸಿರೆಳೆದರು. ಈ ಘಟನೆಯಿಂದ ಇಡೀ ಜಗತ್ತೇ ತಲ್ಲಣಗೊಂಡಿತ್ತು. ಆಕೆಯ ಸಾವಿಗೆ ಕಾರಣವಾದ ಐರ್ಲೆಂಡಿನ ಕಾನೂನು ಬದಲಾವಣೆಗೂ ನಾಂದಿ ಹಾಡಿತು. ಸವಿತಾಳ ಸಾವಿಗೆ ನ್ಯಾಯಾಲಯದಲ್ಲಿ ಜಯ ದೊರೆತ ರೋಚಕ ವಿವರಣೆಯನ್ನು ಲೇಖಕಿ ಜ್ಯೋತಿ ಬದಾಮಿ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಂತಾ ಮಸೂತಿ ಹಾಗೂ ಜಯಶೀಲ ಬ್ಯಾಕೋಡ ಮಾತನಾಡಿದರು.

ಲೇಖಕಿ ಜ್ಯೋತಿ ಬದಾಮಿ, ಸುನಂದಾ ಎಮ್ಮಿ, ಎಂ.ವೈ. ಮೆಣಸಿನಕಾಯಿ, ಎಂ.ಆರ್. ಉಳ್ಳಾಗಡ್ಡಿ, ಎಸ್.ಆರ್. ಹಿರೇಮಠ, ಆಶಾ ಯಮಕನಮರಡಿ, ಲಲಿತಾ ಕ್ಯಾಸಣ್ಣವರ, ವಾಸಂತಿ ಮೇಳದ, ಪ್ರೇಮಾ ಪಾನಶೆಟ್ಟಿ, ಲೇಖಕಿಯರ ಸಂಘ ಮತ್ತು ಲಿಂಗಾಯತ ಮಹಿಳಾ ಸಮಾಜದ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.