ರಾಮದುರ್ಗ: ಸವದತ್ತಿ ತಾಲ್ಲೂಕಿನ ಹೂಲಿಕಟ್ಟಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸಾಮರಸ್ಯ ಹದಗೆಡುವ ವಾತಾವರಣ ಸೃಷ್ಟಿಸಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ವೇದಿಕೆಯ ಪದಾಧಿಕಾರಿಗಳು ತಹಶೀಲ್ದಾರ್ ಸಂಜಯ ಖಾತೆದಾರ ಅವರಿಗೆ ಮನವಿ ಸಲ್ಲಿಸಿದರು.
‘ಹೂಲಿಕಟ್ಟಿ ಗ್ರಾಮಸ್ಥರು ಒಗ್ಗಟ್ಟಿನಿಂದ ಬದುಕು ನಡೆಸುತ್ತ ಬಂದಿದ್ದಾರೆ. ಗ್ರಾಮದ ಶಾಲೆಯ ಮುಖ್ಯಶಿಕ್ಷಕ ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದು, ಅವರನ್ನು ಅಲ್ಲಿಂದ ವರ್ಗಾಯಿಸಬೇಕೆಂಬ ಕಾರಣಕ್ಕೆ ದುಷ್ಕರ್ಮಿಗಳು ಮಕ್ಕಳು ಕುಡಿಯುವ ನೀರಿಗೆ ವಿಷ ಬೆರೆಸಿದ್ದರು. ಶ್ರೀರಾಮ ಸೇನೆಯ ಕಾರ್ಯಕರ್ತನೊಬ್ಬನ ಕುತಂತ್ರವಿದು. ಇದು ಮಾನವ ವಿರೋಧಿ ಕೆಲಸವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು.
‘ಈಗಾಗಲೇ ಸವದತ್ತಿ ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ. ಈ ಮೂವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪ್ರತಿ ಶಾಲೆಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಈ ಘಟನೆ ಮಾಸುವ ತನಕ ಹೂಲಿಕಟ್ಟಿ ಗ್ರಾಮದ ಶಾಲೆಗೆ, ಶಿಕ್ಷಕರಿಗೆ ರಕ್ಷಣೆ ಕೊಡಬೇಕು’ ಎಂದು ಮನವಿ ಮಾಡಿದರು.
ನಾಗಪ್ಪ ಸಂಗೊಳ್ಳಿ, ಎಂ.ಕೆ.ಯಾದವಾಡ, ಫಾರೂಖ್ ಶೇಖ್, ಅಶೋಕ ಹಡಪದ, ರಾಹುಲ್ ಬೋಕರೆ, ಮೀನಾಕ್ಷಿ ಸಂಶಿ, ನೀಲಾವತಿ ನರಗುಂದ ಇದ್ದರು.
ಮುತಾಲಿಕ್ ಧ್ವನಿ ಎಲ್ಲಿ ಅಡಗಿದೆ?
‘ಇದೇ ಕುಕೃತ್ಯವನ್ನು ಅನ್ಯ ಧರ್ಮದವರು ಮಾಡಿದ್ದರೆ ಶ್ರೀ ರಾಮ ಸೇನೆಯ ಮುಖಂಡ ಕಟ್ಟಾ ಹಿಂದುತ್ವವಾದಿ ಪ್ರಮೋದ ಮುತಾಲಿಕ ಅವರು ಇಡೀ ರಾಜ್ಯದಲ್ಲಿ ಬೊಬ್ಬೆ ಹೊಡೆಯುತ್ತಿದ್ದರು. ಆದರೆ ಅವರ ಸಂಘಟನೆಯ ಕಾರ್ಯಕರ್ತನೇ ಅಪರಾಧ ಮಾಡಿದಾಗ ಅವರ ಧ್ವನಿ ಇಲ್ಲವಾಗಿದೆಯೇ?’ ಎಂದು ಜಿ.ಎಂ. ಜೈನೆಖಾನ್ ಮಹಮ್ಮದಶಫಿ ಬೆಣ್ಣಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.