ADVERTISEMENT

‘ಸ್ಕೌಟ್ಸ್‌– ಗೈಡ್ಸ್‌ನಿಂದ ವಿಶ್ವ ಭಾವೈಕ್ಯ’

ಬೆಳಗಾವಿ ಜಿಲ್ಲಾ ಸಂಸ್ಥೆಯ ಕಾರ್ಯಾಲಯ ಉದ್ಘಾಟಿಸಿದ ಪಿ.ಜಿ.ಆರ್. ಸಿಂಧ್ಯಾ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 16:43 IST
Last Updated 11 ಫೆಬ್ರುವರಿ 2023, 16:43 IST
ಬೆಳಗಾವಿಯಲ್ಲಿ ಶನಿವಾರ ಪಿ.ಜಿ.ಆರ್. ಸಿಂಧ್ಯಾ ಅವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್– ಬೆಳಗಾವಿ ಜಿಲ್ಲಾ ಸಂಸ್ಥೆಯ ನವೀಕೃತ ಕಾರ್ಯಾಲಯ ಉದ್ಘಾಟಿಸಿದರು
ಬೆಳಗಾವಿಯಲ್ಲಿ ಶನಿವಾರ ಪಿ.ಜಿ.ಆರ್. ಸಿಂಧ್ಯಾ ಅವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್– ಬೆಳಗಾವಿ ಜಿಲ್ಲಾ ಸಂಸ್ಥೆಯ ನವೀಕೃತ ಕಾರ್ಯಾಲಯ ಉದ್ಘಾಟಿಸಿದರು   

ಬೆಳಗಾವಿ: ‘ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಶಿಕ್ಷಣದ ಜತೆಗೆ ಶಿಸ್ತು ಹಾಗೂ ಭಾವೈಕ್ಯ ಕಲಿಸುವುದೇ ವಿಶೇಷ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ’ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.

ನಗರದಲ್ಲಿ ಶನಿವಾರ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್– ಬೆಳಗಾವಿ ಜಿಲ್ಲಾ ಸಂಸ್ಥೆಯ ನವೀಕೃತ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಆಗಬೇಕಾದರೆ ಅನೇಕ ನಾಯಕರು ಕೊಡುಗೆ ನೀಡಿದ್ದಾರೆ. ಉಪ ರಾಷ್ಟ್ರಪತಿ ಆಗಿದ್ದ ಬಿ.ಡಿ.ಜತ್ತಿ ಕೂಡ ಅಂಥವರ ಸಾಲಿಗೆ ಸೇರಿದವರು. ಬೆಳಗಾವಿಯಲ್ಲಿ ಸ್ಕೌಟ್ಸ್‌– ಗೈಡ್ಸ್‌ ಸಂಸ್ಥೆಯ ಕಟ್ಟಡಕ್ಕೆ ಮುನ್ನುಡಿ ಬರೆದವರು ಬಿ.ಡಿ.ಜತ್ತಿ ಅವರು. ಅವರಂಥ ಧೀಮಂತ ನಾಯಕರ ಸ್ಮರಣೆ ಅಗತ್ಯ’ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯಲ್ಲಿ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಉತ್ಸವ ಮಾಡಿದ್ದು ವಿಶ್ವದಾಖಲೆ ಆಯಿತು. ಅದರಲ್ಲಿ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು. ವಿಶ್ವದ ಬೇರೆಬೇರೆ ದೇಶಗಳ ಸಂಸ್ಕೃತಿ, ಸಂಪ್ರದಾಯ, ಮೌಲ್ಯಗಳ ವಿನಿಮಯ ಸಾಧ್ಯವಾಯಿತು. ವಿದ್ಯಾರ್ಥಿಗಳು ಉತ್ತಮ ಪ್ರಜೆಯಾಗಿ ಬೆಳೆಯಲು ಇಂಥ ಸಮಾವೇಶಗಳು ಅಗತ್ಯ’ ಎಂದರು.

ADVERTISEMENT

‘ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಹಾಯಕಾರಿ. ಅಖಂಡ ಬೆಳಗಾವಿ ಜಿಲ್ಲೆಗೆ ಬಹುದೊಡ್ಡ ಕಚೇರಿ ಸುಂದರವಾಗಿ ನವೀಕೃತಗೊಳಿಸಲಾಗಿದೆ. ಜಿಲ್ಲಾ ಕೇಂದ್ರ ಕಾರ್ಯಾಲಯ ನಿರ್ಮಾಣವಾಗಲು ಪಿಜಿಆರ್ ಸಿಂಧ್ಯಾ ಅವರ ವಿಶೇಷ ಕಾಳಜಿ ದೊಡ್ಡದು. ಇನ್ನು ಮುಂದೆ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿ ಬಂದಂತಾಗಿದೆ’ ಎಂದು ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಾರ್ಯಾಲಯದ ಜಂಟಿ ನಿರ್ದೇಶಕ ಗಜಾನನ ಮಣ್ಣಿಕೇರಿ ಹೇಳಿದರು.

ಮೂಡುಬಿದರೆಯಲ್ಲಿ ಈಚೆಗೆ ಜರುಗಿದ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಉತ್ಸವದಲ್ಲಿ ಪಾಲ್ಗೊಂಡ ಮುಸ್ಕಾನ್ ಮುಲ್ಲಾ, ಶ್ರೀನಿವಾಸ, ಲಕ್ಷ್ಮಿ ಮಾಳಿ ಅನುಭವ ಹಂಚಿಕೊಂಡರು. ಜಿಲ್ಲಾ ಶಾಖೆಯ ವತಿಯಿಂದ ಪಿ.ಜಿ.ಆರ್‌. ಸಿಂಧ್ಯಾ ಅವರನ್ನು ಸನ್ಮಾನಿಸಲಾಯಿತು.

ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ, ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟಿ, ವೈ.ಜಿ. ಭಜಂತ್ರಿ, ಎಸ್.ಪಿ. ದಾಸಪ್ಪನವರ, ಆರ್.ಟಿ. ಬಳಿಗಾರ, ಎ.ಎನ್. ಪ್ಯಾಟಿ, ಎಸ್‌.ಸಿ. ಕರಿಕಟ್ಟಿ, ಎಂ.ಎನ್. ದಂಡಿನ, ಜಿ.ಬಿ. ಬಳಗಾರ, ಎ.ಜಿ. ಮಣ್ಣಿಕೇರಿ, ಪಿ.ಬಿ. ಹಿರೇಮಠ, ಶ್ರೀಮತಿ ಆರ್‌.ಎಂ. ಮಠದ ಸೇರಿದಂತೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತುದಾರು ಇದ್ದರು.

ಪ್ರಭಾವತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಬಿ.ಅತ್ತಾರ ನಿರೂಪಿಸಿದರು. ಎಸ್.ಬಿ.ವಿಠ್ಠಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.