ADVERTISEMENT

ಪುಸ್ತಕಗಳ ಬಗ್ಗೆ ಸಮಾಜದಲ್ಲಿ ಚರ್ಚೆಯಾಗಲಿ: ಸಾಹಿತಿ ಚಂದ್ರಕಾಂತ ಕುಸನೂರ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 12:55 IST
Last Updated 22 ಡಿಸೆಂಬರ್ 2019, 12:55 IST
ಬೆಳಗಾವಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿ.ಎ. ಸನದಿ ಪ್ರತಿಷ್ಠಾನ ಸಹಯೋಗದಲ್ಲಿ ಭಾನುವಾರ ನಡೆದ ಸರಜೂ ಕಾಟ್ಕರ್‌ ಅವರ ಸಾಹಿತ್ಯ ಅವಲೋಕನ–ಸಂವಾದ ಕಾರ್ಯಕ್ರಮವನ್ನು ಸಾಹಿತಿ ಚಂದ್ರಕಾಂತ ಕುಸನೂರ ಉದ್ಘಾಟಿಸಿದರು
ಬೆಳಗಾವಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿ.ಎ. ಸನದಿ ಪ್ರತಿಷ್ಠಾನ ಸಹಯೋಗದಲ್ಲಿ ಭಾನುವಾರ ನಡೆದ ಸರಜೂ ಕಾಟ್ಕರ್‌ ಅವರ ಸಾಹಿತ್ಯ ಅವಲೋಕನ–ಸಂವಾದ ಕಾರ್ಯಕ್ರಮವನ್ನು ಸಾಹಿತಿ ಚಂದ್ರಕಾಂತ ಕುಸನೂರ ಉದ್ಘಾಟಿಸಿದರು   

ಬೆಳಗಾವಿ: ‘ಸಾಹಿತಿಗಳು ವಸ್ತುಸ್ಥಿತಿ ಅರಿತು ಬರೆಯಬೇಕು. ಸಾಹಿತ್ಯ ಕೃತಿಗಳ ಬಗ್ಗೆ ಸಮಾಜದಲ್ಲಿ ಚರ್ಚೆಯಾಗಬೇಕು’ ಎಂದು ಸಾಹಿತಿ ಚಂದ್ರಕಾಂತ ಕುಸನೂರ ಹೇಳಿದರು.

ಇಲ್ಲಿನ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿ.ಎ.ಸನದಿ ಪ್ರತಿಷ್ಠಾನದಿಂದ ಭಾನುವಾರ ನಡೆದ ‘ಸರಜೂ ಕಾಟ್ಕರ್‌ ಅವರ ಸಾಹಿತ್ಯ ಅವಲೋಕನ–ಸಂವಾದ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಲೇಖಕರು, ಕವಿಗಳಿಂದ ಕನ್ನಡದಲ್ಲಿ ರಚನೆಯಾಗಿರುವ ಸಾಹಿತ್ಯಗಳ ಮೌಲ್ಯಮಾಪನವಾಗಬೇಕು. ಈ ಸಾಹಿತ್ಯ ಸಮಾಜಕ್ಕೆ ಎಷ್ಟರಮಟ್ಟಿಗೆ ಅಗತ್ಯವಿದೆ ಎಂಬುದನ್ನು ತಿಳಿಯಬೇಕು. ಮರಾಠಿ, ಬಂಗಾಳಿಯಲ್ಲಿ ಪ್ರತಿ ಕೃತಿಯ ಮೌಲ್ಯಮಾಪನವಾಗುತ್ತಿದೆ. ಹಿಂದಿ ಸಾಹಿತ್ಯಿಕ ವಲಯದಲ್ಲಿಈ ಕೆಲಸವಾಗುತ್ತಿದೆ.ಆದ ಕಾರಣ ಉತ್ತಮ ಪುಸ್ತಕಗಳು ಓದುಗರ ಕೈಗೆ ಸಿಗುವಂತಾಗಿದೆ. ಕನ್ನಡದಲ್ಲಿ ಈ ಕೆಲಸವಾಗಬೇಕು’ ಎಂದು ಹೇಳಿದರು.

ADVERTISEMENT

ವಿಮರ್ಶಿಸಬೇಕು:‘ಕಾದಂಬರಿಗಳು ವಾಸ್ತವ ಹಾಗೂ ಸತ್ಯವನ್ನು ತಿಳಿಸುತ್ತವೆ. ಇವುಗಳನ್ನು ರಚಿಸುವುದಕ್ಕಾಗಿ ಲೇಖಕರು ಸತತ ಅಧ್ಯಯನಶೀಲವಾಗಿರಬೇಕು. ಪ್ರತಿ 5 ವರ್ಷಗಳಿಗೊಮ್ಮೆ ತಾನು ರಚಿಸಿದ ಕೃತಿಗಳನ್ನೆಲ್ಲ ನಿಷ್ಪಕ್ಷತವಾಗಿ ವಿಮರ್ಶಿಸಬೇಕು. ಆಗ ತಾವು ಬರೆದ ಸಾಹಿತ್ಯ, ಕೃತಿಗಳ ಮೌಲ್ಯ ಗೊತ್ತಾಗುತ್ತದೆ’ ಎಂದರು.

ಲೇಖಕ ಶಿರೀಷ ಜೋಶಿ ಅವರು ‘ಸರಜೂ ಕಾಟ್ಕರ್‌ ಅವರ ಕಾದಂಬರಿ’ ಕುರಿತು ಮಾತನಾಡಿ,‘ತರಾಸು, ಎಸ್‌.ಎಲ್‌. ಭೈರಪ್ಪ ಅವರಂತಹ ಕಾದಂಬರಿಕಾರರಲ್ಲಿ ಸರಜೂ ಕಾಟ್ಕರೂ ಸಹ ಒಬ್ಬರಾಗಿದ್ದಾರೆ. ಅವರು ಬರೆದ ಸಾವಿತ್ರಿಭಾಯಿ ಪುಲೆ, ಬಾಜಿರಾವ್ ಮಸ್ತಾನಿ ಸೇರಿ 5 ಕಾದಂಬರಿಗಳು ಚಿತ್ರಗಳಾಗಿವೆ. ಎಲ್ಲ ಕಾದಂಬರಿಗಳುತುಡಿತವನ್ನು ಮೂಲ ಸೂತ್ರವನ್ನಾಗಿ ಇಟ್ಟುಕೊಂಡು ರಚನೆಗೊಂಡಿವೆ‌’ ಎಂದು ಹೇಳಿದರು.

ಸಾಹಿತಿ ಪ್ರೊ.ಜ್ಯೋತಿ ಹೊಸುರ ಅಧ್ಯಕ್ಷತೆ ವಹಿಸಿದ್ದರು. ಸರಜೂ ಕಾಟ್ಕರ್‌ ದಂಪತಿಯನ್ನು ಸನ್ಮಾನಿಸಲಾಯಿತು.

ಸಾಹಿತಿಗಳಾದ ಡಾ.ಪಿ. ನಾಗರಾಜ, ಡಾ.ರಾಮಕೃಷ್ಣ ಮರಾಠೆ, ಡಾ.ಡಿ.ಎಸ್. ಚೌಗಲೆ, ಡಾ.ಪಿ.ಜಿ. ಕೆಂಪಣ್ಣವರ, ಡಾ.ಎ.ಬಿ. ಘಾಟಗೆ, ಯ.ರು. ಪಾಟೀಲ, ರವಿ ಕೊಟಾರಗಸ್ತಿ, ಹಮೀದಾ ಬೇಗಂ ದೇಸಾಯಿ ಇದ್ದರು.

ಆಶಾ ಯಮಕನಮರಡಿ ಭಾವಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಎ.ಎ. ಸನದಿ ನಿರೂಪಿಸಿದರು. ಎಂ.ವೈ. ಮೆಣಸಿನಕಾಯಿ ವಂದಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.