ADVERTISEMENT

ಯರಗಟ್ಟಿ ಸಮೀಪ ಕೈಗಾರಿಕಾ ಪ್ರದೇಶ

ಪ್ರಸ್ತಾವ ಸಲ್ಲಿಸಲು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 15:49 IST
Last Updated 17 ಜುಲೈ 2018, 15:49 IST

ಬೆಳಗಾವಿ: ಇಲ್ಲಿನ ಬಾಚಿ–ರಾಯಚೂರು ರಸ್ತೆಯಲ್ಲಿ ಯರಗಟ್ಟಿ ಸಮೀಪದ ಚಚಡಿ ಅಥವಾ ಮುರಗೋಡು ಬಳಿ ಹೊಸದಾಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು ಪ್ರಸ್ತಾವ ಸಲ್ಲಿಸುವಂತೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.

ಗಣೇಶಪುರ ರಸ್ತೆಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕೈಗಾರಿಕೋದ್ಯಮಿಗಳ ಬೇಡಿಕೆಗೆ ಸ್ಪಂದಿಸಿದ ಸಚಿವರು, ‘ಎರಡು ವಾರದೊಳಗೆ ಸಮಗ್ರ ವರದಿ ನೀಡಬೇಕು’ ಎಂದು ತಿಳಿಸಿದರು.‌

‘ಹೆದ್ದಾರಿ ಸಮೀಪದಲ್ಲಿರುವ ಅಲ್ಲಿ ಸಮತಟ್ಟಾದ 3500 ಎಕರೆಗೂ ಜಾಸ್ತಿ ಜಾಗ ಲಭ್ಯವಿದೆ. ಕೃಷಿ ಚಟುವಟಿಕೆಗಳು ಕೂಡ ನಡೆಯುತ್ತಿಲ್ಲ. ಭೂಸ್ವಾಧೀನ ಪ್ರಕ್ರಿಯೆಗೆ ತೊಂದರೆಯಾಗುವುದಿಲ್ಲ. ಅದೇ ರಸ್ತೆಯಲ್ಲಿರುವ ಸಾಂಬ್ರಾದಲ್ಲಿ ವಿಮಾನನಿಲ್ದಾಣವೂ ಇರುವುದರಿಂದ, ಕೈಗಾರಿಕಾ ಚಟುವಟಿಕೆಗಳಿಗೆ ಪೂರಕವಾಗುತ್ತದೆ’ ಎಂದು ಉದ್ಯಮಿಗಳು ಹೇಳಿದರು.

ADVERTISEMENT

ಉದ್ಯಮಬಾಗ್‌ನಲ್ಲೂ ಸ್ಥಾಪಿಸಿ:

ಉದ್ಯಮಬಾಗ್ ಸಣ್ಣ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಉಮೇಶ ಶರ್ಮಾ ಮಾತನಾಡಿ, ‘ನಗರದಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಬೇಕು. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್‌ ಕೈಗಾರಿಕಾ ಪ್ರದೇಶದ ಮಾದರಿಯಲ್ಲಿ ಇಲ್ಲೂ ಸ್ಥಾಪನೆಯಾಗಬೇಕು. ಇದರಿಂದ ಈ ಭಾಗದ ಯುವಜನರಿಗೆ ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆ. ನಗರದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಆರಂಭಿಸಬೇಕು. ಪ್ರಸ್ತುತ ಇಎಸ್ಐ ಆಸ್ಪತ್ರೆ ಅಶೋಕ ನಗರದಲ್ಲಿ ಇದೆ. ಇದರಿಂದ ಆ ಭಾಗದ ಕಾರ್ಮಿಕರಿಗೆ ಅನುಕೂಲವಾಗುತ್ತಿದೆ. ಇದೇ ರೀತಿ, ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಹೊಂದಿರುವ ಉದ್ಯಮಬಾಗ್ ಪ್ರದೇಶದಲ್ಲೂ ಆಸ್ಪತ್ರೆ ಆರಂಭಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಪ್ರಸ್ತುತ ಭಾಗ್ಯನಗರದಲ್ಲಿರುವ ಡಿಸ್ಪೆನ್ಸರಿಯನ್ನು (ಆಸ್ಪತ್ರೆ) ಉದ್ಯಮಬಾಗ್ ಪ್ರದೇಶಕ್ಕೆ ಶೀಘ್ರವೇ ಸ್ಥಳಾಂತರಿಸಲಾಗುವುದು. ಇದಕ್ಕಾಗಿ ಕಟ್ಟಡವೊಂದದನ್ನು ಗುರುತಿಸಲಾಗಿದೆ’ ಎಂದು ತಿಳಿಸಿದರು.

‘ಇಎಸ್‌ಐ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಔಷಧ ಪೂರೈಕೆಯೂ ಸರಿಯಾಗಿಲ್ಲ. ಇದರಿಂದ, ರೋಗಿಗಳಿಗೆ ತೊಂದರೆಯಾಗುತ್ತಿದೆ. ಚಿಕಿತ್ಸೆಗೆ ಸಂಬಂಧಿಸಿದಂತೆ, ಕೆಲವು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಹಣ ಪಾವತಿಸಲಿಲ್ಲವೆಂದು ಆ ಆಸ್ಪತ್ರೆಗಳು ಸೇವೆ ನಿಲ್ಲಿಸಿವೆ’ ಎಂದು ಉದ್ಯಮಿಗಳು ದೂರಿದರು.

ಹೀಗಾಗದಂತೆ ನೋಡಿಕೊಳ್ಳಿ:

‘ಈ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಉದ್ಯಮಬಾಗ್‌ನಲ್ಲಿ ಕೂಡಲೇ ಆಸ್ಪತ್ರೆ ಆರಂಭಿಸಬೇಕು. ಕ್ರಮೇಣ ಸ್ವಂತ ಕಟ್ಟಡ ನಿರ್ಮಿಸಬೇಕು’ ಎಂದು ಸೂಚಿಸಿದರು.

‘ಭವಿಷ್ಯ ನಿಧಿ (ಪಿಎಫ್) ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯಲ್ಲೂ ಸ್ಥಾಪಿಸಬೇಕು’ ಎಂದು ಉದ್ಯಮಿಗಳು ಕೋರಿದರು.

‘ಈ ಸಂಬಂಧ ಪ್ರಸ್ತಾವ ಸಲ್ಲಿಸಲಾಗಿದ್ದು, ಕೇಂದ್ರ ಕಚೇರಿ ಮಟ್ಟದಲ್ಲಿ ಬಾಕಿ ಇದೆ’ ಎಂದು ಅಧಿಕಾರಿ ತಿಳಿಸಿದರು.

‘ಅನುಮೋದನೆ ದೊರೆಯುವವರೆಗೂ, ಹುಬ್ಬಳ್ಳಿಯಲ್ಲಿರುವ ಪ್ರಾದೇಶಿಕ ಕಚೇರಿ ಆಯುಕ್ತರು ತಿಂಗಳಲ್ಲಿ ಒಂದು ದಿನ ಇಲ್ಲಿಗೆ ಬಂದು ಕುಂದುಕೊರತೆ ಸಭೆ ನಡೆಸಿ, ಅರ್ಜಿಗಳನ್ನು ವಿಲೇವಾರಿ ಮಾಡಬೇಕು’ ಎಂದು ಸಚಿವರು ಸೂಚಿಸಿದರು.

‘ಉಡಾನ್ ಯೋಜನೆಯಡಿ ಬೆಳಗಾವಿ ವಿಮಾನನಿಲ್ದಾಣ ಸೇರಿಸುವಂತೆ ಎಂದು ಕೇಂದ್ರ ಸಚಿವರನ್ನು ಕೋರಲಾಗುವುದು’ ಎಂದರು.

ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ, ಡಾ.ಅಜಯ ನಾಗಭೂಷಣ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ ಇದ್ದರು.

ಅಧಿಕಾರಿಗಳು ಉದ್ಯಮಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಆಗಾಗ ಸಭೆ ನಡೆಸಿ, ಕೈಗಾರಿಕಾ ಪ್ರದೇಶಗಳಲ್ಲಿರುವ ಕುಂದುಕೊರತೆ ಆಲಿಸಬೇಕು. ಅಗತ್ಯ ಪ್ರಸ್ತಾವಗಳನ್ನು ಸಲ್ಲಿಸಬೇಕು.ಕೆ.ಜೆ. ಜಾರ್ಜ್ಕೈಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.