ADVERTISEMENT

ಬೆಳಗಾವಿ: ತುಂಡಾಗಿದ್ದ ಕೈ ಮರುಜೋಡಣೆ ಮಾಡುವಲ್ಲಿ ಯಶಸ್ಸು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 9:48 IST
Last Updated 19 ಫೆಬ್ರುವರಿ 2021, 9:48 IST

ಬೆಳಗಾವಿ: ‘ಐದು ವರ್ಷದ ಬಾಲಕಿಯ ತುಂಡಾಗಿದ್ದ ಕೈಯನ್ನು ಮರುಜೋಡಣೆ ಮಾಡುವಲ್ಲಿ ಯಶಸ್ಸು ಸಾಧಿಸಿದ್ದೇವೆ’ ಎಂದು ಇಲ್ಲಿನ ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್‌ನ ವೈದ್ಯಕೀಯ ನಿರ್ದೇಶಕ ಡಾ.ರವಿ ಬಿ. ಪಾಟೀಲ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಸ್‌ನಲ್ಲಿ ಹೋಗುವಾಗ ಬಾಲಕಿಯು ಬಲಗೈಯನ್ನು ಹೊರ ಚಾಚಿದ್ದಳು. ಎದುರಿನಿಂದ ಬಂದ ಇನ್ನೊಂದು ವಾಹನ ಬಡಿದಿದ್ದರಿಂದ ಕೈ ತುಂಡಾಗಿತ್ತು. 2019ರ ಜೂನ್ 12ರಂದು ಈ ಘಟನೆ ನಡೆದಿತ್ತು. 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿಮರುಜೋಡಣೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬಾಲಕಿಯನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ರವಾನಿಸಲಾಗಿತ್ತು. ಪ್ಲಾಸ್ಟಿಕ್ ಸರ್ಜನ್‌ ಡಾ.ವಿಜ್ಜಲ ಮಾಲಮಂಡೆ ಪ್ರಥಮ ಚಿಕಿತ್ಸೆ ನೀಡಿ, ಸಂಪೂರ್ಣ ತಪಾಸಣೆ ಮಾಡಿದ್ದರು. ಬಳಿಕ ತುಂಡಾದ ಕೈ ಮರುಜೋಡಣೆಗೆ ನಿರ್ಧರಿಸಿದೆವು. ನನ್ನೊಂದಿಗೆ, ಡಾ.ಶುಭಾ ದೇಸಾಯಿ, ಡಾ.ಎ. ಹಂಪಣ್ಣವರ, ಡಾ.ಶ್ರೀಧರ ಕಟದಳ ಹಾಗೂ ಶ್ರೀಧರ ಕಲಕೇರಿ ಮತ್ತು ಸಿಬ್ಬಂದಿ ಈ ಯಶಸ್ವಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಬಾಲಕಿಗೆ ವಾರದವರೆಗೆ ಚಿಕಿತ್ಸೆ ನೀಡಿ, ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಕ್ರಮೇಣ ಸತತ ಮರು ತಪಾಸಣೆ ನಡೆಸಲಾಗಿದೆ ಹಾಗೂ ಪೂರಕ ಚಿಕಿತ್ಸೆ ನೀಡಲಾಗಿದೆ. ಆ ಕೈ ಹಾಗೂ ಬೆರಳುಗಳು ಸಂಪೂರ್ಣವಾಗಿ ಕ್ರಿಯಾಶೀಲವಾಗಿವೆ. ಮೊದಲಿನಂತೆ ಬಾಲಕಿ ತನ್ನ ಕೈ ಮತ್ತು ಬೆರಳುಗಳನ್ನು ಬಳಸುತ್ತಿದ್ದಾಳೆ. ಇದರೊಂದಿಗೆ, ನಮ್ಮ ಚಿಕಿತ್ಸೆ ಯಶಸ್ವಿಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.