
ಮೂಡಲಗಿ: ಮೂಡಲಗಿ ಪಟ್ಟಣದ ಹೊರವಲಯದ ಗಣೇಶ ನಗರ ಸಮೀಪ ಕಟಾವಿಗೆ ಬಂದಿದ್ದ 7 ಎಕರೆ ಕಬ್ಬಿನ ಬೆಳೆಗೆ ಶನಿವಾರ ವಿದ್ಯುತ್ ತಗುಲಿ ಅಂದಾಜು ₹8 ಲಕ್ಷ ಮೌಲ್ಯದ ಕಬ್ಬು ಸಂಪೂರ್ಣ ಸುಟ್ಟುಹೋಗಿದೆ.
ಶನಿವಾರ ಮಧ್ಯಾಹ್ನ 12 ಘಂಟೆಗೆ ಸಮಯದಲ್ಲಿ ಮೂಡಲಗಿ ಪಟ್ಟಣದ ಗಣೇಶ ನಗರದ ಪಾವ೯ತೇವ್ವಾ ಮಲ್ಲಪ್ಪಾ ನೇಮಗೌಡರ, ಆನಂದ ಶಿವಪ್ಪಾ ನೇಮಗೌಡರ, ರಾಮಪ್ಪಾ ನಂದೇಪ್ಪಾ ನೇಮಗೌಡರ ಅವರಿಗೆ ಸೇರಿದ ಸುಮಾರು ಏಳು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ಬೆಂಕಿ ತಗುಲಿದೆ. ಇದನ್ನು ಕಂಡ ಅಕ್ಕ-ಪಕ್ಕದ ಜಮೀನಿನಲ್ಲಿದ್ದ ರೈತರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವುದರೊಳಗೆ ಬೆಂಕಿಗೆ ಕಬ್ಬು ಆಹುತಿಯಾಗಿತ್ತು.
ಬೆಂಕಿಯು ಇತರೆ ಭಾಗಕ್ಕೆ ಹರಡದಂತೆ ತಡೆಯುವ ಉದ್ದೇಶದಿಂದ ಸ್ಥಳದಲ್ಲಿ ಇದ್ದ ಜೆಸಿಬಿ ಯಂತ್ರ ಬಳಸಿ ಸುತ್ತಲಿನ ರೈತರು ಪ್ರಯತ್ನ ಮಾಡಿದ್ದು, ಗಾಳಿಯ ರಬಸಕ್ಕೆ ಬೆಂಕಿಯು ತೀವ್ರವಾಗಿ ಹರಡಿ ಕಬ್ಬು ಸುಟ್ಟು ಕರಕಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಅಗ್ನಿಶಾಮಕ ಘಟಕಕ್ಕೆ ಒತ್ತಾಯ: ಮೂಡಲಗಿ ತಾಲ್ಲೂಕು ಕೇಂದ್ರವಾಗಿದ್ದರೂ ಇನ್ನುವರೆಗೆ ಅಗ್ನಿಶಾಮಕ ಘಟಕ ಪ್ರಾರಂಭವಾಗಿರುವದಿಲ್ಲ. ಮೂಡಲಗಿ ಮತ್ತು ಸುತ್ತಮುತ್ತಲಿನಲ್ಲಿ ಬೆಂಕಿ ಅವಘಡ ಸಂಭವಿಸಿದರೆ 30ರಿಂದ 40 ಕಿ.ಮೀ. ದೂರದ ಗೋಕಾಕ ಇಲ್ಲವೆ ರಾಯಬಾಗ ಅಗ್ನಿಶಾಮಕ ಘಟಕಗಳಿಂದ ವಾಹನಗಳು ಬರುವುದರೊಳಗೆ ಬೆಂಕಿಗೆ ಸುಟ್ಟು ಹೋಗಿರುತ್ತದೆ. ಕೂಡಲೇ ಮೂಡಲಗಿಯಲ್ಲಿ ಅಗ್ನಿಶಾಮಕ ಘಟಕ ಪ್ರಾರಂಭಿಸಲು ಜನರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.