ಬೆಳಗಾವಿ: ಶರಣ ಸಾಹಿತ್ಯದ ಮಹತ್ವವನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರಪಡಿಸುವುದಕ್ಕಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಿರ್ಧರಿಸಿತು.
ಇಲ್ಲಿ ಭಾನುವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾದರಿಯಲ್ಲಿ ಶರಣ ಸಾಹಿತ್ಯ ಪರಿಷತ್ತನ್ನೂ ಸಶಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ಆರ್ಥಿಕ ನೆರವು ಪಡೆದುಕೊಳ್ಳಬೇಕು. ಪರಿಷತ್ತಿನಿಂದ ಹೊರತರುತ್ತಿರುವ ‘ಮಹಾಮನೆ’ ಪತ್ರಿಕೆ ಮೂಲಕ ಶರಣರ ಸಂದೇಶವನ್ನು ಹೆಚ್ಚು ಹೆಚ್ಚು ತಿಳಿಸಿ, ಸಮಾಜದ ಅಭಿವೃದ್ಧಿಯಲ್ಲಿ ಕ್ರಿಯಾಶೀಲವಾಗಬೇಕು ಎಂದು ತೀರ್ಮಾನಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಶರಣರ ಸಂದೇಶಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಅವುಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪರಿಷತ್ತು ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ರೂಪಿಸಬೇಕು. ‘ಮಹಾಮನೆ’ ಪತ್ರಿಕೆ ಉತ್ತಮವಾಗಿ ಮೂಡಿಬರುತ್ತಿದ್ದು, ಹೆಚ್ಚು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಪರಿಷತ್ತಿನ ಸದಸ್ಯತ್ವ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.
ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ, ಗೌರವ ಸಲಹೆಗಾರ ಗೊ.ರು. ಚನ್ನಬಸಪ್ಪ, ಉಪಾಧ್ಯಕ್ಷ ಜರಗನಹಳ್ಳಿ ಶಿವಶಂಕರ್, ಹಿರಿಯ ಉಪಾಧ್ಯಕ್ಷ ಚಂದ್ರಕಾಂತ ಬೆಲ್ಲದ, ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಎಸ್. ಕೆಂಡದಮಠ, ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಸ್. ಮಾಳಿ ಸೇರಿದಂತೆ ಬಹುತೇಕ ಜಿಲ್ಲಾ ಘಟಕದ ಅಧ್ಯಕ್ಷರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.