ADVERTISEMENT

ಮಾದರಿ ಬದುಕು ನಮ್ಮದಾಗಬೇಕು: ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 16:26 IST
Last Updated 1 ಮಾರ್ಚ್ 2021, 16:26 IST
ಗೋಕಾಕದಲ್ಲಿ ಸೋಮವಾರ ಆರಂಭವಾದ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ನಡೆದ ಯುವ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ ಅವರನ್ನು ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಸನ್ಮಾನಿಸಿದರು
ಗೋಕಾಕದಲ್ಲಿ ಸೋಮವಾರ ಆರಂಭವಾದ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ನಡೆದ ಯುವ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ ಅವರನ್ನು ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಸನ್ಮಾನಿಸಿದರು   

ಗೋಕಾಕ: ‘ಅಸಾಧ್ಯವಾದುದು ಯಾವುದೂ ಇಲ್ಲ. ಛಲ ಇರಬೇಕು. ಇತರರಿಗೆ ಮಾದರಿಯಾಗುವ ಬದುಕು ನಮ್ಮದಾಗಬೇಕು’ ಎಂದು ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ ಹೇಳಿದರು.

ಇಲ್ಲಿನ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಶೂನ್ಯ ಸಂಪಾದನಮಠದ 16ನೇ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಸೋಮವಾರ ಆಯೋಜಿಸಿದ್ದ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಯುವ ಜನತೆಗೆ ಜ್ಞಾನಾರ್ಜನೆ ಮುಖ್ಯವಾಗಿದೆ. ಅದಕ್ಕೆ ಎಲ್ಲಕ್ಕೂ ಮಿಗಿಲಾದ ಆದ್ಯತೆಯನ್ನು ನೀಡಿದಾಗ ಮಾತ್ರ ಅದನ್ನು ಸಂಪಾದಿಸಲು ಸಾಧ್ಯ. ನನ್ನಿಂದ ಏನೂ ಆಗುವುದಿಲ್ಲ ಎಂಬ ತಾತ್ಸಾರ ಮನೋಭಾವ ಬರಬಾರದು. ಎಲ್ಲವೂ ಸಾಧ್ಯವೆಂಬ ಮಹದಾಸೆ ಇರಬೇಕು. ಮನುಷ್ಯನ್ನು ಸೋಲಿಸುವ ವಸ್ತು ಈ ಜಗತ್ತಿನಲ್ಲಿ ಇಲ್ಲ. ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು’ ಎಂದು ತಿಳಿಸಿದರು.

ADVERTISEMENT

‘ಯುವಜನರು ಮೊಬೈಲ್ ಫೋನ್, ಸಾಮಾಜಿಕ ಜಾಲತಾಣವನ್ನು ಅನವಶ್ಯವಾಗಿ ಬಳಸುವುದರಿಂದ ಅಂತರ ಕಾಯ್ದುಕೊಳ್ಳುವುದು ಇಂದಿನ ಅಗತ್ಯವಾಗಿದೆ’ ಎಂದರು.

‘ಬಡತನ ಶಾಪವಲ್ಲ. ಜ್ಞಾನ ಸಂಪಾದಿಸಬೇಕು’ ಎಂದು ಹೇಳಿದರು.

ಮರಡೀಮಠದ ಪವಾಡೇಶ್ವರ ಸ್ವಾಮೀಜಿ ಮಾತನಾಡಿದರು. ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ವರ್ತಕ ಪ್ರಶಾಂತ ಕುರಬೇಟ, ವಿದ್ಯಾರ್ಥಿ ಮುಖಂಡರಾದ ಲಕ್ಕಪ್ಪ ಗೌಡರ, ಕೀರ್ತಿ ಸಸಾಲಟ್ಟಿ, ಪವಿತ್ರಾ ಹತ್ತರವಾಟ, ರಿಯಾಜ ನದಾಫ್, ಸ್ನೇಹಲ್ ಗರಗಟ್ಟಿ, ಮಾಲಾ ಐದುಡ್ಡಿ ಇದ್ದರು.

ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರು ಮತ್ತು ದಾಸೋಹಿಗಳಾದ ಚಂದ್ರಶೇಖರ ಕೊಣ್ಣೂರ, ಪ್ರಸನ್ ತಂಬಾಕೆ, ಎಂ. ಪಟೇಲ ಅವರನ್ನು ಸನ್ಮಾನಿಸಲಾಯಿತು.

ವಿವೇಕ ಜತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್.ಕೆ. ಮಠದ ನಿರೂಪಿಸಿದರು. ಶಿಕ್ಷಕ ರಾಮಪ್ಪ ಮಿರ್ಜಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.