ADVERTISEMENT

ಮಾರುಕಟ್ಟೆ ಸ್ಥಳಾಂತರ ಅವೈಜ್ಞಾನಿಕ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 12:38 IST
Last Updated 11 ಜೂನ್ 2021, 12:38 IST
ಬೆಳಗಾವಿಯ ತಾತ್ಕಾಲಿಕ ತರಕಾರಿ ಮಾರುಕಟ್ಟೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೇಟಿ ನೀಡಿ ರೈತರ ಕುಂದುಕೊರತೆ ಆಲಿಸಿದರು
ಬೆಳಗಾವಿಯ ತಾತ್ಕಾಲಿಕ ತರಕಾರಿ ಮಾರುಕಟ್ಟೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೇಟಿ ನೀಡಿ ರೈತರ ಕುಂದುಕೊರತೆ ಆಲಿಸಿದರು   

ಬೆಳಗಾವಿ: ‘ಎಪಿಎಂಸಿ ಮಾರ್ಕೆಟ್‌ ಯಾರ್ಡ್‌ನಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ನಗರದ ಸಿಪಿಇಡಿ ಕಾಲೇಜು ಮತ್ತು ಆರ್.ಟಿ.ಒ. ಮೈದಾನಗಳಿಗೆ ಸ್ಥಳಾಂತರಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ’ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ತಾತ್ಕಾಲಿಕ ತರಕಾರಿ ಮಾರುಕಟ್ಟೆಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ‘ಎಪಿಎಂಸಿ ಆವರಣದಲ್ಲಿ ಸುಮಾರು 13 ಎಕರೆ ವಿಶಾಲ ಪ್ರದೇಶದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆಗಳ ಪ್ರಾಂಗಣ ರಚನೆಯಾಗಿದೆ. ಅದನ್ನು ಕೋವಿಡ್ ನಿಯಮಾವಳಿಗಳ ಪ್ರಕಾರ ಬಳಸಬಹುದಿತ್ತು. ರೈತರು, ವ್ಯಾಪಾರಿಗಳು, ಗ್ರಾಹಕರು ಅಂತರ ಕಾಪಾಡಿಕೊಂಡು ಉಪಯೋಗಿಸಲು ಒದಗಿಸಬಹುದಿತ್ತು. ಬದಲಿಗೆ ಅದಕ್ಕಿಂತ ಕಡಿಮೆ ಪ್ರದೇಶ ಲಭ್ಯವಿರುವ ಸ್ಥಳಗಳಿಗೆ ಸ್ಥಳಾಂತರಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರದ ನಿಯಮಾನುಸಾರ ಬೆಳಿಗ್ಗೆ 6ರಿಂದ 10ರವರೆಗೆ ಸಮಯ ನಿಗದಿಪಡಿಸಿದ ಕಾರಣ ಸಮಯ ಸಾಲುತ್ತಿಲ್ಲ. ಕಡಿಮೆ ಸಮಯದಲ್ಲಿ ಹೆಚ್ಚು ಖರೀದಿದಾರರಿಲ್ಲದೇ ರೈತರು ಕಡಿಮೆ ಬೆಲೆಗೆ ತರಕಾರಿ ಮಾರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ತರಕಾರಿ ಬೆಳೆದ ರೈತರಿಗೆ ಹಾನಿ ಉಂಟಾಗಿದೆ. ಮಳೆ ಆದಾಗಲಂತೂ ಈ ಕಿರಿದಾದ ಮೈದಾನಗಳಲ್ಲಿ ವ್ಯಾಪಾರ–ವಹಿವಾಟುಗೆ ಸಾಕಷ್ಟು ತೊಂದರೆ ಆಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಎಪಿಎಂಸಿಯಲ್ಲಿರುವ ಉತ್ತಮ ವ್ಯವಸ್ಥೆಯನ್ನು ಬಿಟ್ಟು ಹೊರಾಂಗಣದಲ್ಲಿ ತಾತ್ಕಾಲಿಕ ಶೆಡ್‌ಗಳ ನಿರ್ಮಾಣಕ್ಕೆ ಕೂಡ ಅನಗತ್ಯ ಖರ್ಚಿನ ಹೊರೆಯಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಸುಸಜ್ಜಿತವಾದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣವನ್ನು ಉಪಯೋಗಿಸಿಕೊಳ್ಳಲು ಆದೇಶಿಸುವಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೊಂದಿಗೆ ಚರ್ಚಿಸಲಾಗಿದೆ’ ಎಂದರು.

ಎಪಿಎಂಸಿ ಅಧ್ಯಕ್ಷ ಯುವರಾಜ ಕದಮ್, ನಿರ್ದೇಶಕ ಮನೋಜ್, ಎಪಿಎಂಸಿ ಸೂಪರಿಂಟೆಂಡೆಂಟ್‌ ನವೀನ್ ಪಾಟೀಲ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡ, ಮಹಾನಗರ ಘಟಕದ ಅಧ್ಯಕ್ಷ ಕಲ್ಲಪ್ಪ ಶಹಾಪೂರಕರ, ಗ್ರಾಮೀಣ ಘಟಕದ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಬಾಹುಬಲಿ ದೊಡ್ಡನ್ನವರ, ಮಹಾವೀರ ನಾಶಿಪುಡಿ, ಉಪಾಧ್ಯಕ್ಷ ಶೇಖರಗೌಡ ಮೊದಗಿ, ರೈತ ಮುಖಂಡ ಪ್ರಕಾಶ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.