ADVERTISEMENT

ಮೂಡಲಗಿ | ಶಿವಬೋಧರಂಗ ಜಾತ್ರೆಗೆ ಸಜ್ಜು: ಇಂದಿನಿಂದ 4 ದಿನ ಧಾರ್ಮಿಕ ಕಾರ್ಯಕ್ರಮ

ಬಾಲಶೇಖರ ಬಂದಿ
Published 18 ಮೇ 2024, 5:08 IST
Last Updated 18 ಮೇ 2024, 5:08 IST
<div class="paragraphs"><p>ಮೂಡಲಗಿಯ ಶಿವಬೋಧರಂಗ ಸ್ವಾಮಿಯ ಸನ್ನಿಧಿ</p></div>

ಮೂಡಲಗಿಯ ಶಿವಬೋಧರಂಗ ಸ್ವಾಮಿಯ ಸನ್ನಿಧಿ

   

ಮೂಡಲಗಿ: ನಾಡಿನ ಪ್ರಮುಖ ಧಾರ್ಮಿಕ ಮಠಗಳಲ್ಲಿ ಒಂದಾಗಿರುವ ಮೂಡಲಗಿಯ ಶಿವಬೋಧರಂಗ ಮಠ ಕರ್ನಾಟಕ ಮತ್ತು ಮಹಾರಾಷ್ಟ್ರದ ಸಹಸ್ರಾರು ಭಕ್ತರ ಶ್ರದ್ಧಾಕೇಂದ್ರವಾಗಿದೆ. ಉಜ್ವಲ ಧಾರ್ಮಿಕ ಪರಂಪರೆ ಮುಂದುವರಿಸಿಕೊಂಡು ಬಂದಿರುವ ಜಾಗೃತ ಸ್ಥಳ ಎನಿಸಿದೆ.

ಈ ಮಠದ ಪವಾಡಪುರುಷ ಶಿವಬೋಧರಂಗ ಸ್ವಾಮೀಜಿ ಪುಣ್ಯತಿಥಿ ಅಂಗವಾಗಿ ಮೇ 18ರಿಂದ 21ರವರೆಗೆ ಜಾತ್ರೆ ಜರುಗಲಿದ್ದು, ಈಗಿನ ಪೀಠಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮೀಜಿ ಮತ್ತು ಶ್ರೀಧರಬೋಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ. ಸರ್ವಧರ್ಮೀಯರು ಪಾಲ್ಗೊಂಡು ಭಾವೈಕ್ಯತೆ ಮೆರೆಯಲಿದ್ದಾರೆ.

ADVERTISEMENT

ಜಾತ್ರೆಯ ಪ್ರಮುಖ ವಿಧಿಯಾಗಿರುವ ಪಲ್ಲಕ್ಕಿ ಉತ್ಸವ 18ರಂದು ಬೆಳಿಗ್ಗೆ 11ಕ್ಕೆ ನಡೆಯಲಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದಾರೆ. ಸಂಜೆ 4ಕ್ಕೆ ಗುರುಮಂಡಲ ಪೂಜೆ, 5ಕ್ಕೆ ಮಹಾಪ್ರಸಾದ ವಿತರಣೆ, ರಾತ್ರಿ 10ಕ್ಕೆ ಪಲ್ಲಕ್ಕಿ ಸೇವೆ ನಡೆಯಲಿದೆ.

19ರಂದು ಬೆಳಿಗ್ಗೆ 11ಕ್ಕೆ ಮಹಾಪ್ರಸಾದ ವಿತರಣೆ, ಸಂಜೆ 4ರಿಂದ ರಾತ್ರಿ 10ರವರೆಗೆ ಮೇಲಿನ ಮಠದಲ್ಲಿ ಸಂಗೀತ ಗೋಷ್ಠಿ, ರಾತ್ರಿ 10ಕ್ಕೆ ಪಲ್ಲಕ್ಕಿ ಸೇವೆ ನೆರವೇರಲಿದೆ.

20ರಂದು ಭಕ್ತರು ಸಕ್ಕರೆ ಹರಕೆ ತೀರಿಸಲಿದ್ದು, ಸಂಜೆ 4ರಿಂದ ರಾತ್ರಿ 10ರವರೆಗೆ ಸಂಗೀತ ಗೋಷ್ಠಿ ನಡೆಯಲಿದೆ. 21ರಂದು ನಸುಕಿನ 5.30ಕ್ಕೆ ಮೂಲ ಸನ್ನಿಧಿ ಸ್ಥಳಕ್ಕೆ ವಾದ್ಯಗಳೊಂದಿಗೆ ಪಲ್ಲಕ್ಕಿ ಆಗಮನವಾಗಲಿದ್ದು, ಶ್ರೀಗಳಿಂದ ಸಿಹಿ ವಿತರಣೆಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಮಠದ ಹಿನ್ನೆಲೆ: 15ನೇ ಶತಮಾನದಲ್ಲಿ ಮಹಾರಾಷ್ಟ್ರದ ಠಾಕಳಿ ಗ್ರಾಮದಲ್ಲಿ ಆಶ್ರಯಿಸಿದ ಮಹಾತಪಸ್ವಿ ಸಹಜಬೋಧ ಸ್ವಾಮೀಜಿ ಆಜ್ಞೆಯಂತೆ, ಅವರ ಶಿಷ್ಯ ಶ್ರೀರಂಗಬೋಧ ಸ್ವಾಮೀಜಿ ದಕ್ಷಿಣ ನಿಶ್ಚಿತ ದಿಕ್ಕಿನಲ್ಲಿ ಪ್ರಯಾಣ ಮಾಡಿ ನೆಲೆಸಿದ ಸ್ಥಳವೇ ಈಗಿನ ಮೂಡಲಗಿ. ಶ್ರೀರಂಗಬೋಧರು ಬರುವಾಗ ತಮ್ಮೊಂದಿಗೆ ತಂದು ಪ್ರತಿಷ್ಠಾಪಿಸಿದ ಸಹಜಬೋಧ ಸ್ವಾಮಿಗಳ ಪಾದುಕೆಗಳು ಮೂಡಲಗಿಯ ಶ್ರೀಮಠದಲ್ಲಿ ಇಂದಿಗೂ ಪೂಜಿಸಲ್ಪಡುತ್ತವೆ.

ಶ್ರೀರಂಗ ಬೋಧರ ನಂತರ, ಅದ್ವಯಬೋಧರು, ಶಿವಬೋಧರು, ಪಾಂಡುರಂ ಗಬೋಧರು, ಶಿವರಾಮಬೋಧರು, ಸಂಗಬೋಧರು, ತಮ್ಮಣ್ಣಾಬೋಧರು, ಕೋನೇರಿ ಬೋಧರು, ಸಂಗಬೋಧರು ಮತ್ತಿತರರು ಭಕ್ತಿ ಪರಂಪರೆ ಬೆಳೆಸಿದರು. ಈಗ ಇರುವ 13ನೇ ಪೀಠಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮೀಜಿ ಮತ್ತು ಶ್ರೀಧರಬೋಧ ಸ್ವಾಮೀಜಿ ಮಠದ ಭವ್ಯ ಪರಂಪರೆ ಬೆಳೆಸುತ್ತಿದ್ದಾರೆ.

ಶಿಕ್ಷಣ ಪ್ರಸಾರ, ಇಲ್ಲಿನ ದನದ ಪೇಟೆ ಹಾಗೂ ವಿವಿಧ ಕ್ಷೇತ್ರಗಳ ಬೆಳವಣಿಗೆಗೆ ಮಠದಿಂದ ನೀಡಿರುವ ಭೂದಾನ ಸ್ಮರಣೀಯವಾಗಿದೆ. ಆಯಾ ಕಾಲದಲ್ಲಿ ಅನೇಕ ಪವಾಡ ನಡೆದಿದ್ದು, ಮಠದ ಮಹಿಮೆ ಅಪಾರವೆನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.