ಬೆಳಗಾವಿಯಲ್ಲಿ ಸೋಮವಾರ ನಡೆದ ನಾಲ್ಕು ಜಿಲ್ಲೆಗಳ ಮಠಾಧೀಶರ ಸಮಾವೇಶ
ಬೆಳಗಾವಿ: ಹುಬ್ಬಳ್ಳಿಯಲ್ಲಿ ಸೆ.19ರಂದು ಜರಗುವ ವೀರಶೈವ- ಲಿಂಗಾಯತ ಏಕತಾ ಸಮಾವೇಶಕ್ಕೆ ಬೆಂಬಲ ನೀಡಲಾಗುವುದು ಎಂದು ಇಲ್ಲಿ ಸೋಮವಾರ ನಡೆದ ಮಠಾಧೀಶರ ಸಮಾವೇಶದಲ್ಲಿ ನಾಲ್ಕು ಜಿಲ್ಲೆಗಳ ಶಿವಾಚಾರ್ಯರು ನಿರ್ಣಯ ಕೈಗೊಂಡರು.
ಸಮೀಪದ ಭೂತರಾಮನ ಹಟ್ಟಿಯಲ್ಲಿರುವ ಪಂಚಗ್ರಾಮ ಮುಕ್ತಿಮಠದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವಿಭಾಗೀಯ ಸಮಾವೇಶದಲ್ಲಿ 100 ಶಿವಾಚಾರ್ಯರು ಪಾಲ್ಗೊಂಡಿದ್ದರು.
ಅಲ್ಲದೇ, ಸೆ.22 ರಿಂದ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ನಿರ್ಣಯ ಅಂಗೀಕರಿಸಿದಂತೆ ಎಲ್ಲ ವೀರಶೈವ– ಲಿಂಗಾಯತರು ಸಮೀಕ್ಷೆ ನಮೂನೆಯ ಅನುಸೂಚಿಯಲ್ಲಿಯ ಧರ್ಮದ ಕಾಲಂ ಅಡಿಯಲ್ಲಿ ‘ಇತರೆ’ ಎಂದು ಹೇಳಿರುವ ಕಾಲಂನಲ್ಲಿ ‘ವೀರಶೈವ– ಲಿಂಗಾಯತ’ ಎಂದೇ ನಮೂದಿಸಬೇಕು. ಜಾತಿಯ ಕಾಲಂದಲ್ಲಿಯೂ ‘ವೀರಶೈವ– ಲಿಂಗಾಯತ’ ಎಂದೇ ಬರೆಸಬೇಕು ಎಂಬ ನಿರ್ಣಯವನ್ನು ಈ ಸಮಾವೇಶವು ಅನುಮೋದಿಸಿತು.
ಕೆಲವೇ ಮಠಾಧೀಶರು ಸಮಾಜದಲ್ಲಿ ದ್ವಂದ್ವ ಹುಟ್ಟುಹಾಕಿ ವೀರಶೈವ ಬೇರೆ ಲಿಂಗಾಯತ ಬೇರೆ ಎಂದು ಭಕ್ತ ಸಮುದಾಯದ ಮನಸ್ಥಿತಿ ಸಂಕೀರ್ಣವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ, ಧರ್ಮದ ಮೂಲವಾಹಿನಿಯ ಪಂಚಪೀಠಗಳ ಪ್ರಾಚೀನ ಗುರುಪರಂಪರೆಗೆ ಧಕ್ಕೆ ಉಂಟು ಮಾಡುವಲ್ಲಿ ನಿರತರಾಗಿದ್ದಾರೆ. ಇದರ ವಿರುದ್ಧ ಸೆ.19ರಂದು ಹುಬ್ಬಳ್ಳಿಯ ಏಕತಾ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳುವ ಕುರಿತೂ ಚರ್ಚಿಸಿದರು.
ಅಖಿತ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ, ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಟಕೋಳ ಎಂ.ಚಂದರಗಿ ಹಿರೇಮಠದ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ, ಶಿರಕೋಳದ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ, ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೊಲ್ಲಾಪುರದ ಜಿಲ್ಲಾ ಘಟಕದ ಅಧ್ಯಕ್ಷ, ನೂಲಸುರಗೀಶ್ವರ ಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅಂಬಿಕಾ ನಗರದ ವಿಶ್ವಾರಾಧ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಬಾಗೋಜಿಕೊಪ್ಪ, ಬಿಚಗುತ್ತಿ ಹರಲಾಪುರ, ಹಳೇ ಹುಬ್ಬಳಿ, ಶಿವಾಪುರ, ಸತ್ತಿಗೇರಿ, ಸಂಗೊಳ್ಳಿ, ಸುತಗಟ್ಟಿ, ಮಾವಿನಕಟ್ಟಿ, ಶರಣಮಟ್ಟಿ, ಮಮದಾಪುರ, ಹೂಲಿ, ಮುತ್ನಾಳ, ಬನ್ನೂರ, ಪಾಶ್ಚಾಪುರ, ಕಬ್ಬೂರ, ಮುಳ್ಳೂರು, ಉಳ್ಳಾಗಡ್ಡಿ ಖಾನಾಪುರ, ನವಲಗುಂದ, ಹಿರೇಮುನ್ನಳ್ಳಿ, ಬ್ಯಾಹಟ್ಟಿ, ಅಮ್ಮಿನಬಾವಿ ಸೇರಿದಂತೆ ವಿವಿಧೆಡೆಯ ಶಿವಾಚಾರ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.