ಸರಜೂ ಕಾಟ್ಕರ್ ಅವರ ಛತ್ರಪತಿ ಶಿವಾಜಿ ‘ದಿ ಗ್ರೇಟ್ ಮರಾಠ’ ಕೃತಿ ಬಿಡುಗಡೆಗೊಳಿಸಿದ ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ: ‘ಶಿವಾಜಿ ಮಹಾರಾಜರು ಮರಾಠ ಸಮುದಾಯಕ್ಕೆ ಸೀಮಿತವಲ್ಲ. ಅವರನ್ನು ‘ದಿ ಗ್ರೇಟ್ ಮರಾಠ’ ಎನ್ನುವುದಕ್ಕಿಂತ, ‘ದಿ ಗ್ರೇಟ್ ಇಂಡಿಯನ್’ ಎಂದು ಕರೆಯಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ಕನ್ನಡ ಭವನದಲ್ಲಿ ಸಾಹಿತಿ ಸರಜೂ ಕಾಟ್ಕರ್ ರಚಿಸಿದ ಛತ್ರಪತಿ ಶಿವಾಜಿ ‘ದಿ ಗ್ರೇಟ್ ಮರಾಠ’ ಪುಸ್ತಕವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಶಿವಾಜಿ ಮಹಾರಾಜರ ಸೈನ್ಯದಲ್ಲಿ ಮರಾಠರು, ಮುಸ್ಲಿಮರು ಸಹೋದರರಂತೆ ಇದ್ದರು. ಶಿವಾಜಿ ಜತೆಗೆ ಹಿಂದೂಗಳಿಗಿಂತ ಮುಸ್ಲಿಮರೇ ಹೆಚ್ಚಿದ್ದರು. ಶಿವಾಜಿ ರಕ್ಷಣೆಗೆ ನಿಂತವರೇ ಮುಸ್ಲಿಮರು. ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಶಿವಾಜಿ, ಬ್ರಿಟಿಷರ ವಿರುದ್ಧ ಎದೆಯೊಡ್ಡಿ ಹೋರಾಡಿದ್ದರು. ಅವರ ನೈಜ ಇತಿಹಾಸ ಅರಿಯಲು ಇಂಥ ಕೃತಿಗಳು ಅಗತ್ಯ’ ಎಂದರು.
‘ಸರಜೂ ಕಾಟ್ಕರ್ ಈ ಕೃತಿ ಮೂಲಕ ಓದುಗರಿಗೆ ಶಿವಾಜಿ ನೈಜ ಇತಿಹಾಸ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಸರಿಯಾದ ದೃಷ್ಟಿಕೋನದಿಂದ ಓದಿದರೆ ಮಾತ್ರ, ದೇಶದ ವಾಸ್ತವ ಇತಿಹಾಸ ನಮಗೆ ತಿಳಿಯುತ್ತದೆ. ಶಿವಾಜಿ, ಬಸವಾದಿ ಶರಣರು, ಬಿ.ಆರ್.ಅಂಬೇಡ್ಕರ್ ಅವರು ಒಂದೇ ಸಮುದಾಯಕ್ಕೆ ಸೀಮಿತರಾದವರಲ್ಲ’ ಎಂದು ಅಭಿಪ್ರಾಯಪಟ್ಟರು.
‘ಶೂದ್ರ ಎನ್ನುವ ಕಾರಣಕ್ಕೆ, ಶಿವಾಜಿ ಮಹಾರಾಜರ ಪಟ್ಟಾಭಿಷೇಕ ತಡೆಯಲಾಗಿತ್ತು. ಇಂದು ಅವರ ಪರವಾಗಿ ಇರುವವರೇ, ಅಂದು ವಿರೋಧಿಗಳಾಗಿದ್ದರು. ನಿಜವಾದ ಇತಿಹಾಸ ತಿಳಿಯುವವರೆಗೆ ಗೊಂದಲ ಇದ್ದೇ ಇರುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ, ‘ಶಿವಾಜಿ ಮಹಾರಾಜರು ದೇಶವನ್ನು ದಾಳಿಗಳಿಂದ ಮತ್ತು ಸಂಸ್ಕೃತಿಯಿಂದ ರಕ್ಷಿಸಿದ ಮಹಾನ್ ನಾಯಕ. ದಾಳಿಗಳಿಂದ ತತ್ತರಿಸಿದ್ದ ಜನರಲ್ಲಿ ಅವರು ಆತ್ಮವಿಶ್ವಾಸ ತುಂಬಿದ್ದರು. ನೈಜ ಘಟನೆಗಳಿಂದ ಚಿತ್ರಣಗೊಂಡ ಕೃತಿ ಇದಾಗಿದೆ’ ಎಂದು ಶ್ಲಾಘಿಸಿದರು.
ಸರಜೂ ಕಾಟ್ಕರ್ ಮಾತನಾಡಿ, ‘ಈ ಕೃತಿ ರಚಿಸಲು ಶಿವಾಜಿ ಮಹಾರಾಜರ ಕುರಿತು ಕನ್ನಡ, ಮರಾಠಿ, ಇಂಗ್ಲಿಷ್‌ನಲ್ಲಿ ಪ್ರಕಟಗೊಂಡ ಅನೇಕ ಗ್ರಂಥಗಳ ಅಧ್ಯಯನ ಮಾಡಿದ್ದೇನೆ. ಅದರಲ್ಲಿನ ಘಟನೆಗಳನ್ನು ಓರೆಗೆ ಹಚ್ಚಿ, ಸತ್ಯ ಸಂಗತಿಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದೇನೆ. ಇದಕ್ಕಾಗಿ ಮರಾಠಿಯಲ್ಲಿ ಶಿವಾಜಿ ಕುರಿತು ಬರೆದಿದ್ದ ಅನೇಕ ಬರಹಗಾರರ ಸಂದರ್ಶನ ಮಾಡಿದ್ದೇನೆ’ ಎಂದರು.
‘ಶಿವಾಜಿ ಚರಿತ್ರೆ ಬರೆಯುವುದು ನನ್ನ ಕನಸಿನ ಯೋಜನೆಯಾಗಿತ್ತು. ಈ ಕೃತಿ ಮೂಲಕ ಅದು ಸಾಕಾರಗೊಂಡಿದೆ’ ಎಂದು ಹೇಳಿದರು.
ರಾಮಕೃಷ್ಣ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುದೇವಿ ಹುಲೆಪ್ಪನವರಮಠ, ಯ.ರು.ಪಾಟೀಲ ಕೃತಿ ಪರಿಚಯಿಸಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಸುಮಾ ಕಾಟ್ಕರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.