ADVERTISEMENT

ಯಮಕನಮರಡಿ: ಶಿವಾಜಿ ಪ್ರತಿಮೆ ತೆರವು, ವಿವಾದ

ಮಣಗುತ್ತಿ: ಬಡಿಗೆಗಳೊಂದಿಗೆ ಬಂದಿದ್ದವರ ಮೇಲೆ ಪೊಲೀಸರಿಂದ ಲಾಠಿಪ್ರಹಾರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 18:51 IST
Last Updated 9 ಆಗಸ್ಟ್ 2020, 18:51 IST
ಮಣಗುತ್ತಿ ಗ್ರಾಮದಲ್ಲಿ ಶಿವಸೇನಾ ನೇತೃತ್ವದಲ್ಲಿ ಮರಾಠಾ ಸಮಾಜದವರು ಶಿವಾಜಿ ಪ್ರತಿಮೆ ಮರುಪ್ರತಿಷ್ಠಾಪನೆಗೆ ಆಗ್ರಹಿಸಿ ಭಾನುವಾರ ಪ್ರತಿಭಟನೆ ನಡೆಸಿದರು
ಮಣಗುತ್ತಿ ಗ್ರಾಮದಲ್ಲಿ ಶಿವಸೇನಾ ನೇತೃತ್ವದಲ್ಲಿ ಮರಾಠಾ ಸಮಾಜದವರು ಶಿವಾಜಿ ಪ್ರತಿಮೆ ಮರುಪ್ರತಿಷ್ಠಾಪನೆಗೆ ಆಗ್ರಹಿಸಿ ಭಾನುವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ/ ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಏಕಾಏಕಿ ಪ್ರತಿಷ್ಠಾಪಿಸಿ, ಕೆಲವೇ ದಿನಗಳಲ್ಲಿ ತೆರವುಗೊಳಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಪ್ರತಿಷ್ಠಾಪಿಸಿದ್ದು ಅನಧಿಕೃತವೆಂಬುದು ಒಂದು ಗುಂಪಿನ ವಾದವಾದರೆ, ಪ್ರತಿಮೆ ತೆರವುಗೊಳಿಸಿದ್ದಕ್ಕೆ ಮತ್ತೊಂದು ಗುಂಪು ಅಸಮಾಧಾನ ವ್ಯಕ್ತಪಡಿಸಿದೆ. ಗ್ರಾಮದಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಸ್ಥಳೀಯ ದೇವಸ್ಥಾನದ ಟ್ರಸ್ಟ್‌ಗೆ ಸೇರಿದ ಜಾಗದಲ್ಲಿ ಕೆಲವರು ಆ. 5ರ ರಾತ್ರಿ ಶಿವಾಜಿ ಪ್ರತಿಮೆ ಪ್ರತಿಷ್ಠಾಪಿಸಿದ್ದರು. ವಿರೋಧ ವ್ಯಕ್ತವಾದ್ದರಿಂದ ಆ.6ರಂದು ಪ್ರತಿಮೆಗೆ ಕೇಸರಿ ಬಣ್ಣದ ತಾಡಪಾಲು ಹಾಕಿ ಮುಚ್ಚಲಾಗಿತ್ತು. 7ರಂದು ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಇಒ ಹಾಗೂ ಪೊಲೀಸರು ಮುಖಂಡರ ಸಮ್ಮುಖದಲ್ಲಿ ನಡೆಸಿದ ಸಭೆಯ ನಿರ್ಧಾರದಂತೆ, ಪ್ರತಿಮೆ ತೆರವುಗೊಳಿಸಿ ಚಾವಡಿಯಲ್ಲಿ ಇಡಲಾಗಿದೆ.

ADVERTISEMENT

‘ಕಳೆದ ವರ್ಷ ಗ್ರಾಮ ಪಂಚಾಯಿತಿಯಲ್ಲಿ ಚರ್ಚಿಸಿದಂತೆ ಒಂದೇ ಎತ್ತರದ ಶಿವಾಜಿ, ಡಾ.ಬಿ.ಆರ್. ಅಂಬೇಡ್ಕರ್‌, ಮಹರ್ಷಿ ವಾಲ್ಮೀಕಿ, ಬಸವಣ್ಣ ಹಾಗೂ ಶ್ರೀಕೃಷ್ಣ ಪ್ರತಿಮೆಗಳನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸಬೇಕು. ಅಲ್ಲಿಯವರೆಗೂ ಯಾವುದೇ ಪ್ರತಿಮೆ ಪ್ರತಿಷ್ಠಾಪನೆ ಬೇಡ’ ಎಂಬ ನಿರ್ಧಾರವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಈ ನಡುವೆ, ‘ಕರ್ನಾಟಕದಲ್ಲಿ ಶಿವಾಜಿ ಪ್ರತಿಮೆಯನ್ನು ಅಕ್ರಮವಾಗಿ ತೆರವುಗೊಳಿಸಲಾಗಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿದ್ದರಿಂದ ವಿಷಯವು ಭಾಷಾ ವೈಷಮ್ಯದ ರೂಪ ಪಡೆದುಕೊಂಡಿದೆ ಎನ್ನಲಾಗುತ್ತಿದೆ.

‘ಶಿವಾಜಿ ಭಕ್ತರೇ ಮತ್ತೊಂದು ಪ್ರಮುಖ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ಪ್ರತಿಮೆಯನ್ನು ಸುರಕ್ಷಿತವಾಗಿಟ್ಟಿದ್ದಾರೆ. ಇದನ್ನು ಹೊರಗಿನವರು ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ’ ಎಂದು ಮರಾಠ ಸಮಾಜದ ಹಿರಿಯರು ವಿಡಿಯೊ ಮಾಡಿ ತಿಳಿಸಿದ್ದಾರೆ.

ಶಿವಸೇನಾ ನೇತೃತ್ವದಲ್ಲಿ ಮರಾಠ ಸಮಾಜದವರು ಭಾನುವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು. ಹೊರವಲಯದಲ್ಲಿ ಕೋಲುಗಳೊಂದಿಗೆ ಬಂದಿದ್ದ ಜನರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

‘ಅನುಮತಿ ಪಡೆದು ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. ತೆರವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗೌರವಪೂರ್ವಕವಾಗಿ ಪ್ರತಿಮೆಯನ್ನು ಮರುಪ್ರತಿಷ್ಠಾಪಿಸಬೇಕು’ ಎಂದು ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಸಮನ್ವಯ ಉಸ್ತುವಾರಿ ಸಚಿವ ಏಕನಾಥ ಶಿಂಧೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮರಾಠಿಯಲ್ಲಿ ಪತ್ರ ಬರೆದಿದ್ದಾರೆ.

ಫಡಣವೀಸ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿ: ಸಂಜಯ್‌ ರಾವತ್‌
ಮುಂಬೈ (ಪಿಟಿಐ):
ಛತ್ರಪತಿ ಶಿವಾಜಿ ಮಹಾರಾಜ್‌ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿರುವ ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್‌ ರಾವತ್‌, ಎಲ್ಲ ಪಕ್ಷಗಳೂ ಜೊತೆಯಾಗಿ, ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಬೇಕು ಎಂದು ತಿಳಿಸಿದರು.

‘ಒಂದೇ ನಾಯಕತ್ವದಲ್ಲಿ ಎಲ್ಲರೂ ಜೊತೆಯಾಗಿ ಬೆಳಗಾವಿ ಪೊಲೀಸರ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಬೇಕು’ ಎಂದರು.

ಸ್ಥಳೀಯ ಬಿಜೆಪಿ ನಾಯಕ ಆಶಿಶ್‌ ಶೆಲಾರ್‌, ‘ಪ್ರತಿಮೆ ತೆರವಿಗೆ ಸ್ಥಳೀಯ ಕಾಂಗ್ರೆಸ್‌ ಶಾಸಕರೇ ಆದೇಶಿಸಿದ್ದರು. ಹೀಗಾಗಿ ಕಾಂಗ್ರೆಸ್‌ ಶಾಸಕನ ವಿರುದ್ಧ ಶಿವಸೇನಾ ಪ್ರತಿಭಟನೆ ನಡೆಸಲು ಸಿದ್ಧವಿದೆಯೇ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.