
ಹುಕ್ಕೇರಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲೆಂಬ ಉದ್ದೇಶದಿಂದ ಶಿವಾನಂದ ಗ್ರಾಮೀಣ ವಿದ್ಯಾಪೀಠಕ್ಕೆ 9 ಎಕರೆ ಜಮೀನು ಮಂಜೂರುಗೊಳಿಸಿದ್ದು ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ವಿದ್ಯಾಪೀಠವು ಜ್ಞಾನಕೇಂದ್ರವಾಗಿ ಬೆಳೆಯಲಿ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ತಾಲ್ಲೂಕಿನ ಘೋಡಗೇರಿ ಗ್ರಾಮದ ಶಿವಾನಂದ ಗ್ರಾಮೀಣ ವಿದ್ಯಾಪೀಠಕ್ಕೆ ಸರ್ಕಾರದ ವತಿಯಿಂದ ಶೈಕ್ಷಣಿಕ ಉದ್ದೇಶಕ್ಕಾಗಿ 9 ಎಕರೆ ಜಮೀನು ಮಂಜೂರುಗೊಳಿಸಿದ ಹಿನ್ನೆಲೆ ಮಠದ ಆಡಳಿತ ಮಂಡಳಿ ಹಾಗೂ ಸದ್ಭಕ್ತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಕಳೆದ 30 ವರ್ಷಗಳ ರಾಜಕೀಯದಲ್ಲಿ ನಾವು ಮೊದಲ ಪ್ರಾಶಸ್ತ್ಯವನ್ನು ಶಿಕ್ಷಣಕ್ಕೆ ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ ಶೇ 99ರಷ್ಟು ಶಾಲಾ- ಕಾಲೇಜುಗಳನ್ನು ಅಭಿವೃದ್ಧಿಗೊಳಿಸಿದ್ದು, ಮುಂದೆಯೂ ಈ ಕೆಲಸ ನಿರಂತರವಾಗಿ ನಡೆಯಲಿದೆ ಎಂದರು.
ಅಥಣಿ ತಾಲ್ಲೂಖಿನ ಕಕಮರಿ ಮಠದ ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮೀಜಿ ಮಾತನಾಡಿ, ಮಾತು ಬೆಳ್ಳಿ, ಮೌನ ಬಂಗಾರವೆಂಬ ಗಾದೆಯಂತೆ ಕಾರ್ಯ ನಿರ್ಮಹಿಸುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು. ಮುಖ್ಯಮಂತ್ರಿಯಾದರೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಮಾತನಾಡಿ, 9 ಎಕರೆ ಸರ್ಕಾರದಿಂದ ಜಮೀನು ಮಂಜೂರುಗೊಳಿಸಿದ್ದಕ್ಕೆ ಧನ್ಯವಾದ ತಿಳಿಸಿದರು. ಹುಕ್ಕೇರಿ ಕ್ಯಾರಗುಡ್ಡ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಪಾಟೀಲ್, ಮುಖಂಡರಾದ ಬಸವರಾಜ ಮಟಗಾರ, ರಿಷಬ್ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.