
ಬೆಳಗಾವಿ: ಇಲ್ಲಿನ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ನಾಡಿನ ಹಿರಿಯ ಸಾಹಿತಿಗಳು ಮತ್ತು ಯುವ ಸಾಹಿತಿಗಳಿಗೆ 2023, 2024 ಮತ್ತು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನ.11ರಂದು ಬೆಳಿಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವುಗಳನ್ನು ಪ್ರದಾನ ಮಾಡಲಿದ್ದಾರೆ.
‘ಬೆಂಗಳೂರಿನ ಕವಿ ಎಚ್.ಎಸ್.ಶಿವಪ್ರಕಾಶ ಅವರನ್ನು 2023ನೇ ಸಾಲಿನ ಕಾವ್ಯ ಪ್ರಶಸ್ತಿ, ಬೆಂಗಳೂರಿನ ಚಿಂತಕ ಮತ್ತು ಪತ್ರಕರ್ತ ಜಿ.ರಾಮಕೃಷ್ಣ ಅವರನ್ನು 2024ನೇ ಸಾಲಿನ ವೈಚಾರಿಕ ಮತ್ತು ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ದಾವಣಗೆರೆಯ ಕಥೆಗಾರ್ತಿ ಬಿ.ಟಿ.ಜಾಹ್ನವಿ ಅವರನ್ನು 2025ನೇ ಸಾಲಿನ ಕಥಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೂರು ಪ್ರಶಸ್ತಿಗಳಿಗೆ ತಲಾ ₹50 ಸಾವಿರ ನಗದು ಬಹುಮಾನವಿದೆ’ ಎಂದು ಟ್ರಸ್ಟ್ ಅಧ್ಯಕ್ಷೆ ವಿನಯಾ ಒಕ್ಕುಂದ ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಯುವ ಸಾಹಿತ್ಯ ಪುರಸ್ಕಾರಕ್ಕೆ ಮೂವರನ್ನು ಆಯ್ಕೆ ಮಾಡಿದ್ದೇವೆ. 2023ನೇ ಸಾಲಿನ ಪುರಸ್ಕಾರ ಶಿವಮೊಗ್ಗದ ಕೆ.ಅಕ್ಷತಾ ಅವರಿಗೆ, 2024ನೇ ಸಾಲಿನ ಪುರಸ್ಕಾರ ಮಂಗಳೂರಿನ ವಿಲ್ಸನ್ ಕಟೀಲ್ ಅವರಿಗೆ ಮತ್ತು 2025ನೇ ಸಾಲಿನ ಪುರಸ್ಕಾರ ರಾಯಚೂರಿನ ಆರಿಫ್ ರಾಜಾ ಅವರಿಗೆ ಲಭಿಸಿದೆ. ಈ ಪುರಸ್ಕಾರಗಳು ತಲಾ ₹10 ಸಾವಿರ ನಗದು ಬಹುಮಾನ ಒಳಗೊಂಡಿವೆ’ ಎಂದು ವಿವರಿಸಿದರು.
‘ರಾಜ್ಯಮಟ್ಟದ ಯುವ ಕಥೆ ಸ್ಪರ್ಧೆಯಲ್ಲಿ ಮಣಿಕಂಠ ಗೊದಮನಿ ಪ್ರಥಮ, ಸಂತೋಷ ನಾಯಿಕ ದ್ವಿತೀಯ, ಪ್ರಹ್ಲಾದ ಡಿ.ಎಂ. ತೃತೀಯ, ರಾಜ್ಯಮಟ್ಟದ ಯುವ ಕಾವ್ಯ ಸ್ಪರ್ಧೆಯಲ್ಲಿ ವಿದ್ಯಾ ಪ್ರಥಮ, ಮಂಜುಳಾ ಜಿ.ಎಚ್.ದ್ವಿತೀಯ, ಶಿವರಾಜ ಅರಳಿ ತೃತೀಯ ಮತ್ತು ಮುದ್ರಾಡಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಅವರಿಗೂ ಇದೇವೇಳೆ ಬಹುಮಾನ ನೀಡಲಾಗುವುದು’ ಎಂದರು.
ಟ್ರಸ್ಟ್ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ, ಸದಸ್ಯರಾದ ಎಚ್.ಬಿ.ಕೋಲಕಾರ, ಗೀತಾಂಜಲಿ ಕುರುಡಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.