ADVERTISEMENT

ಬೆಳಗಾವಿ: ಜಿಲ್ಲೆಯಾದ್ಯಂತ ಶಿವ ನಾಮ ಸ್ಮರಣೆ; ಜಾಗರಣೆ

ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 12:10 IST
Last Updated 4 ಮಾರ್ಚ್ 2019, 12:10 IST
ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಮಹಾಶಿವರಾತ್ರಿ ಅಂಗವಾಗಿ ನೂರಾರು ಭಕ್ತರು ಭಾಗವಹಿಸಿದ್ದರು
ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಮಹಾಶಿವರಾತ್ರಿ ಅಂಗವಾಗಿ ನೂರಾರು ಭಕ್ತರು ಭಾಗವಹಿಸಿದ್ದರು   

ಬೆಳಗಾವಿ: ನಗರ ಹಾಗೂ ಜಿಲ್ಲೆಯಾದ್ಯಂತ ಸೋಮವಾರ ಮಹಾಶಿವರಾತ್ರಿ ಹಬ್ಬವನ್ನು ಭಕ್ತರು ಸಂಭ್ರಮ ಮತ್ತು ಭಕ್ತಿ ಭಾವದಿಂದ ಆಚರಿಸಿದರು.

ಶಿವ ಮಂದಿರಗಳನ್ನು ಹಾಗೂ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಭಕ್ತರು ಕುಟುಂಬ ಸಮೇತ ಬಂದು ದೇವರ ದರ್ಶನ ಪಡೆದು ಪುನೀತ ಭಾವ ತಳೆದರು.

ಕಾರಂಜಿ ಮಠ, ತಾಲ್ಲೂಕಿನ ಬಡೇಕೊಳ್ಳಮಠ, ಕಡೋಲಿಯ ದುರದುಂಡೀಶ್ವರ ಮಠದಲ್ಲಿ ವಿಶೇಷ ಕಾರ್ಯಕ್ರಮಗಳು ಹಾಗೂ ಜಾತ್ರಾ ಮಹೋತ್ಸವಗಳು ನಡೆದವು. ಸಾವಿರಾರು ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಉಪವಾಸ ವ್ರತ ಆಚರಿಸಿ, ಇಷ್ಟಾರ್ಥ ಸಿದ್ಧಿಗೆ ದೇವರಲ್ಲಿ ಪ್ರಾರ್ಥಿಸಿದರು.

ADVERTISEMENT

ಕಪಿಲೇಶ್ವರ ಮಂದಿರ, ಶಿವಾಜಿ ನಗರದ ವೀರಭದ್ರೇಶ್ವರ, ಶಹಾಪುರದ ಮಹಾದೇವ ಮಂದಿರ, ಕ್ಯಾಂಪ್‌ನಲ್ಲಿರುವ ಮಿಲಿಟರಿ ಮಹಾದೇವ, ಸದಾಶಿವ ನಗರದ ಸದಾಶಿವ ಮಂದಿರ, ಮಹಾಂತೇಶ ನಗರದ ಮಹಾದೇವ ಮಂದಿರ, ಸಹ್ಯಾದ್ರಿ ನಗರದ ಮಹಾಬಳೇಶ್ವರ ಮಂದಿರ, ಶಿವಬಸವ ನಗರದ ‍ಪಶುಪತಿ ದೇವಾಲಯ, ರಾಮತೀರ್ಥ ನಗರದ ಶಿವಾಲಯ, ಶಾಹುನಗರದ ಶಿವ ದೇವಾಲಯ, ಕಂಗ್ರಾಳಿಯ ಶಿವಮಂದಿರ... ಮೊದಲಾದ ಕಡೆಗಳಲ್ಲಿ ದೇವರ ಮೂರ್ತಿಗೆ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಬಿಲ್ವ ಪತ್ರಾರ್ಚನೆ, ಕುಂಕುಮಾರ್ಚನೆ ಮತ್ತಿತರ ಪೂಜಾ ವಿಧಿ–ವಿಧಾನಗಳು ನಡೆದವು. ಬಿಲ್ವ ಪತ್ರೆ, ಪುಷ್ಪ, ಕ್ಷೀರದೊಂದಿಗೆ ಬಂದಿದ್ದ ಭಕ್ತರು ಅಭಿಷೇಕ ಸಲ್ಲಿಸಿ ನಮಿಸಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ರಾಮಲಿಂಗಕಿಂಡ್ ಗಲ್ಲಿಯ ರಾಮಲಿಂಗೇಶ್ವರ ದೇಗುಲದಲ್ಲಿ 12 ಜ್ಯೋತಿರ್ಲಿಂಗಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿತ್ತು. ತ್ರಯಂಬಕೇಶ್ವರ, ಮಹಾಕಾಳೇಶ್ವರ, ಭೀಮಾಶಂಕರ, ರಾಮೇಶ್ವರ, ವಿಶ್ವನಾಥ, ಓಂಕಾರೇಶ್ವರ, ವೈಜನಾಥ ಲಿಂಗಗಳನ್ನು ವಿಶೇಷವಾಗಿ ಅಲಂಕಾರ ಮಾಡಿ ಪ್ರದರ್ಶಿಸಲಾಗಿತ್ತು. ನೂರಾರು ಭಕ್ತರು ಅವುಗಳನ್ನು ವೀಕ್ಷಿಸಿ, ನಮನ ಸಲ್ಲಿಸಿದರು.

ರಾತ್ರಿ ಜಾಗರಣೆ ಹಾಗೂ ಭಜನೆಗಳೊಂದಿಗೆ ಶಿವಾಲಯಗಳಲ್ಲಿ ಶಿವನಾಮ ಸ್ಮರಣೆ ಮೊಳಗಿತು. ಬೆಳಿಗ್ಗೆ ಪೂಜೆ ಸಲ್ಲಿಸಿದ್ದ ಭಕ್ತರು, ರಾತ್ರಿ ದೇಗುಲಗಳಲ್ಲಿ ಆಯೋಜಿಸಿದ್ದ ಜಾಗರಣೆ, ಶಿವಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ವಿವಿಧ ಭಜನಾ ತಂಡಗಳು ಕಾರ್ಯಕ್ರಮ ನೀಡುವ ಮೂಲಕ ಜಾಗರಣೆ ಇದ್ದವರಿಗೆ ನೆರವಾದವು. ಮಂಗಳವಾರ ಬೆಳಿಗ್ಗೆವರೆಗೂ ಜಾಗರಣೆ ನಡೆಯಲಿವೆ. ಬಹುತೇಕ ದೇಗುಲಗಳ ಆವರಣದಲ್ಲಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.