
ರಾಯಬಾಗ: ಬಾವನ ಸೌಂದತ್ತಿಯ ಓಂಕಾರ ಆಶ್ರಮ ಮಠದ ಪೀಠಾಧಿಪತಿ ಶಿವಶಂಕರ ಸ್ವಾಮೀಜಿ ಅವರು ಅನಾರೋಗ್ಯದಿಂದಾಗಿ ಮಿರಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ನಿಧನರಾದರು.
ಕಳೆದ ಕೆಲ ದಿನಗಳಿಂದ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ವೈದ್ಯರ ಸಲಹೆಯ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿವಶಂಕರ ಸ್ವಾಮೀಜಿ ಅವರು ಸರಳತೆ, ಸೇವಾಭಾವ ಮತ್ತು ಧಾರ್ಮಿಕ ಪ್ರವಚನಗಳ ಮೂಲಕ ನೂರಾರು ಭಕ್ತರ ಮನ ಗೆದ್ದ ಮಹಾನ್ ಸಂತರಾಗಿದ್ದರು. ಅವರ ನಿಧನದ ಸುದ್ದಿ ತಿಳಿದ ಕೂಡಲೇ ಆಶ್ರಮದ ಆವರಣದಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಶೋಕದ ವಾತಾವರಣ ಆವರಿಸಿದೆ.
ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಭಕ್ತರಲ್ಲಿ ಮಡುಗಟ್ಟಿದ ಆಕ್ರಂದನ ಕೇಳಿಬರುತ್ತಿದೆ. ಬುಧವಾರ ಸಂಜೆ 6 ಗಂಟೆಯಿಂದ ಗುರುವಾರ ಬೆಳಿಗ್ಗೆ 8 ಗಂಟೆವರೆಗೆ ಪೂಜ್ಯರ ಅಂತಿಮ ದರ್ಶನಕ್ಕೆ ಮಹಾದೇವ ಆವರಣದಲ್ಲಿ ಇಡಲಾಗುವುದು. ನಂತರ 8.30 ರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ 10.30 ಕ್ಕೆ ವೀರಶೈವ ಲಿಂಗಾಯತ ವಿಧಿವಿಧಾನದ ಪ್ರಕಾರ ಓಂಕಾರ ಆಶ್ರಮ ಮಠದ ಆವರಣದಲ್ಲಿ ಅಂತಿಮ ಸಂಸ್ಕಾರ ನೆರವೇರಿಸುವುದು ಎಂದು ಗ್ರಾಪಂ ಸದಸ್ಯ ಧೂಳಗೌಡ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ನಂದಿಕುರಳಿಯ ಪಂಚಲಿಂಗೇಶ್ವರ ವೀರಭದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಮಾಜದ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ಆಯೋಜಿಸಿ ನಿರ್ಧರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.