ADVERTISEMENT

ಕೃಷಿ ಉತ್ಪಾದನೆ ದ್ವಿಗುಣಗೊಳ್ಳಲು ತಾಂತ್ರಿಕತೆ ಅಳವಡಿಸಿಕೊಳ್ಳಿ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 10:26 IST
Last Updated 19 ಜೂನ್ 2022, 10:26 IST
ನೇಸರಗಿ ಸಮೀಪದ ಮತ್ತಿಕೊಪ್ಪ ಗ್ರಾಮದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ರೈತರು ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು. ಶಾಸಕ ಮಹಾಂತೇಶ ದೊಡ್ಡಗೌಡರ, ಸಚಿವೆ ಶೋಭಾ ಕರಂದ್ಲಾಜೆ, ಪ್ರಭಾಕರ ಕೋರೆ ಇತರರಿದ್ದಾರೆ
ನೇಸರಗಿ ಸಮೀಪದ ಮತ್ತಿಕೊಪ್ಪ ಗ್ರಾಮದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ರೈತರು ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು. ಶಾಸಕ ಮಹಾಂತೇಶ ದೊಡ್ಡಗೌಡರ, ಸಚಿವೆ ಶೋಭಾ ಕರಂದ್ಲಾಜೆ, ಪ್ರಭಾಕರ ಕೋರೆ ಇತರರಿದ್ದಾರೆ   

ನೇಸರಗಿ (ಬೆಳಗಾವಿ ಜಿಲ್ಲೆ): ‘ಚಿಕ್ಕ ಹಿಡುವಳಿದಾರರು ಸಹಕಾರ ಕೃಷಿ ಮಾಡಬೇಕು. ತಾವು ಬೆಳೆದ ಉತ್ಪನ್ನಗಳ ಮಾರಾಟಕ್ಕೆ ಸ್ವತಃ ವ್ಯವಸ್ಥೆ ಮಾಡಿಕೊಳ್ಳಬೇಕು. ಉತ್ಪಾದನೆ ದ್ವಿಗುಣಗೊಳ್ಳಲು ತಾಂತ್ರಿಕತೆ ಅಳವಡಿಸಿಕೊಳ್ಳಬೇಕು’ ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.

ಸಮೀಪದ ಮತ್ತಿಕೊಪ್ಪ ಗ್ರಾಮದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ರೈತರು ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಎಲ್‌ಇ ಸಂಸ್ಥೆ ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಿದೆ. ಪ್ರಭಾಕರ ಕೋರೆ ಪ್ರಯತ್ನದ ಫಲವಾಗಿ ಗ್ರಾಮೀಣ ಭಾಗದಲ್ಲಿ ದೇಶದಲ್ಲೇ ಮಾದರಿಯಾದ ಕೇಂದ್ರ ತಲೆ ಎತ್ತಿ ನಿಂತಿದೆ. ಈ ಭಾಗದ ಕೃಷಿಕರಿಗೆ ನೆರವಾಗಲು ಹಾಗೂ ಸಮಾಜದ ಅಭಿವೃದ್ಧಿಗೆ ಕೆಎಲ್‌ಇ ಸಂಸ್ಥೆ ಕೊಡುಗೆ ಅಪಾರವಾಗಿದೆ. ಈ ಕೇಂದ್ರದಲ್ಲಿ ರೈತರಿಗೆ ಕಾಲಕಾಲಕ್ಕೆ ಉತ್ತಮ ತರಬೇತಿ, ಮಾರ್ಗದರ್ಶನ ನೀಡಬೇಕು’ ಎಂದರು.

‘ಕೃಷಿ ಆಧಾರಿತ ಉದ್ದಿಮೆಗಳನ್ನು ಆರಂಭಿಸಲು ಶೇ 3ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಹಣ್ಣು, ತರಕಾರಿಗಳನ್ನು ವಿವಿಧೆಡೆ ರಫ್ತು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಎಣ್ಣೆ ಪದಾರ್ಥಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಇಲ್ಲಿ ತರಬೇತಿ ಪಡೆಯಲು ಬರುವವರಿಗೆ ಅನುಕೂಲವಾಗಲೆಂದು ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ರೈತರ ಬೆಳೆಗಳನ್ನು ವಿದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಧಾನಿಯವರ ಇಚ್ಛೆಯಂತೆ ವೈಜ್ಞಾನಿಕವಾಗಿ ಸೋಯಾ, ಶೇಂಗಾ ಬೆಳೆದು ಖಾದ್ಯತೈಲ ಮಾಡಲಾಗುತ್ತಿದೆ. 350 ಟನ್ ಬೀಜಗಳನ್ನು ಮಧ್ಯಪ್ರದೇಶಕ್ಕೆ ರಫ್ತು ಮಾಡಲಾಗುತ್ತಿದೆ’ ಎಂದರು.

ಶಾಸಕ ಮಹಾಂತೇಶ ದೊಡಗೌಡರ, ‘ಏತ ನೀರಾವರಿ ಯೋಜನೆಗಳಿಗೆ ತ್ವರಿತವಾಗಿ ಅನುದಾನ ನೀಡಿ, ಕಾಮಗಾರಿ ಆರಂಭಿಸಲು ಸಹಕರಿಸಬೇಕು’ ಎಂದು ಸಚಿವರಿಗೆ ಕೋರಿದರು. ಐಸಿಎಆರ್‌ ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣ್ಯ, ಕೇಂದ್ರದ ಕಾರ್ಯಾಧ್ಯಕ್ಷ ಬಿ.ಆರ್.ಪಾಟೀಲ, ಪ್ರಾಚಾರ್ಯೆ ಶ್ರೀದೇವಿ ಅಂಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.