ಚಿಕ್ಕೋಡಿ: ಚಿಕ್ಕೋಡಿ-ತಾಲ್ಲೂಕಿನ ಮಜಲಟ್ಟಿ ಗ್ರಾಮದ ಹೊರವಲಯದಲ್ಲಿ 6 ಎಕರೆ ಪ್ರದೇಶದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದರೂ ಉಪನ್ಯಾಸಕರ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದೆ. ಅವಶ್ಯಕ ಕೊಠಡಿ, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯಗಳ ಕೊರತೆ ಎದ್ದು ಕಾಣುತ್ತಿದೆ.
1992ರಲ್ಲಿ ಸ್ಥಾಪನೆಯಾಗಿರುವ ಮಜಲಟ್ಟಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳನ್ನು ಹೊಂದಿದೆ. 2025-26ನೇ ಸಾಲಿನ ಪ್ರಥಮ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ 160, ವಾಣಿಜ್ಯ ವಿಭಾಗದಲ್ಲಿ 198, ವಿಜ್ಞಾನ ವಿಭಾಗದಲ್ಲಿ 985 ಸೇರಿದಂತೆ 1343 ವಿದ್ಯಾರ್ಥಿಗಳಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ 145, ವಾಣಿಜ್ಯ ವಿಭಾಗದಲ್ಲಿ 169, ವಿಜ್ಞಾನ ವಿಭಾಗದಲ್ಲಿ 740 ವಿದ್ಯಾರ್ಥಿಗಳು ಸೇರಿದಂತೆ 1054 ವಿದ್ಯಾರ್ಥಿಗಳು ಇದ್ದಾರೆ.
ಪ್ರಸಕ್ತ ಸಾಲಿನಲ್ಲಿ ಪ್ರಥಮ ವರ್ಷದಲ್ಲಿ 1343 ಹಾಗೂ ದ್ವಿತೀಯ ವರ್ಷದಲ್ಲಿ 1054 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2397 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕಾಲೇಜಿಗೆ ಓರ್ವ ಪ್ರಾಚಾರ್ಯ, ಓರ್ವ ಗ್ರಂಥಪಾಲಕ, ಓರ್ವ ಪ್ರಥಮ ದರ್ಜೆ ಸಹಾಯಕ, 53 ಜನ ಉಪನ್ಯಾಸಕ ಹುದ್ದೆಗಳು ಮಂಜೂರಾತಿ ಇವೆ. ಪ್ರಸ್ತುತ ಕಾಲೇಜಿನಲ್ಲಿ 16 ಜನ ಉಪನ್ಯಾಸಕರು, ಓರ್ವ ಪ್ರಾಚಾರ್ಯ, ಓರ್ವ ಗ್ರಂಥಪಾಲಕ, ಓರ್ವ ಪ್ರಥಮ ದರ್ಜೆ ಸಹಾಯಕರು ಮಾತ್ರ ಇದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರ ಸಂಖ್ಯೆ ಇಲ್ಲದ್ದರಿಂದ ಗುಣಮಟ್ಟದ ಶಿಕ್ಷಣ ನೀಡುವುದು ಅಸಾಧ್ಯವಾಗುತ್ತದೆ ಎಂದು ತಿಳಿದು ಪ್ರತಿ ವರ್ಷ 47 ಜನ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ. 37 ಜನ ಅತಿಥಿ ಉಪನ್ಯಾಸಕರಿಗೆ ಸರ್ಕಾರದಿಂದ ಗೌರವ ಧನ ನೀಡಲಾಗುತ್ತದೆ.
10 ಜನ ಅತಿಥಿ ಉಪನ್ಯಾಸಕರು, ಪ್ರಯೋಗಾಲಯ ಸಹಾಯಕರು-3, ಕಚೇರಿ ಸಹಾಯಕರು-2, ದೈಹಿಕ ಶಿಕ್ಷಣ ಉಪನ್ಯಾಸಕರು-1, ಕಾವಲುಗಾರರು-2, ಡಿ ದರ್ಜೆ ನೌಕರರು-5 ಸೇರಿದಂತೆ 23 ಜನರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆ, ಬೋಧನಾ ಸಾಮಗ್ರಿ ಖರೀದಿ ಸೇರಿದಂತೆ ವಿವಿಧ ಕೆಲಸಗಳಿಗಾಗಿ ವಿದ್ಯಾರ್ಥಿಗಳ ಪಾಲಕರಿಂದ ಸಂಗ್ರಹಿಸುವ ಕಾಲೇಜು ಅಭಿವೃದ್ಧಿ ನಿಧಿಯಿಂದ ಪ್ರತಿ ತಿಂಗಳು ಗೌರವ ಧನ ನೀಡಲಾಗುತ್ತದೆ.
ಈಗಾಗಲೇ 6 ಪ್ರಯೋಗಾಲಯಗಳಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಇನ್ನೂ 3 ಪ್ರಯೋಗಾಲಯಗಳ ಅವಶ್ಯಕತೆ ಇದೆ. 24 ಕೊಠಡಿಗಳಿದ್ದು, ಶಾಸಕ ದುರ್ಯಧನ ಐಹೊಳೆ ಅವರ ವಿಶೇಷ ಅನುದಾನದಿಂದ 5 ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹೀಗಿದ್ದರೂ ಇನ್ನೂ 6 ಕೊಠಡಿಗಳ ಅವಶ್ಯಕತೆ ಇದೆ. ಸುಸಜ್ಜಿತವಾದ ಗ್ರಂಥಾಲಯ, ಆಟದ ಮೈದಾನ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಕಾಲೇಜಿಗೆ ಒದಗಿಸಿಕೊಡಬೇಕಿದೆ.
ಗುಣಮಟ್ಟದ ಕಲಿಕೆಯಲ್ಲಿ ರಾಜ್ಯದಲ್ಲಿ ಮಜಲಟ್ಟಿಯ ಸರ್ಕಾರಿ ಪಿಯು ಕಾಲೇಜು ಪ್ರಖ್ಯಾತಿಯನ್ನು ಗಳಿಸಿದ್ದು, ಹೀಗಾಗಿ ಚಿಕ್ಕೋಡಿ, ರಾಯಬಾಗ, ಹುಕ್ಕೇರಿ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಸಹಸ್ರಾರು ವಿದ್ಯಾರ್ಥಿಗಳು ಕಲಿಯಲು ಇಲ್ಲಿ ಬರುತ್ತಾರೆ. 2024-25ನೇ ಸಾಲಿನಲ್ಲಿ ಕಲಾ ವಿಭಾಗದ ವಿದ್ಯಾರ್ಥಿನಿ ಕಾವೇರಿ ಮಲ್ಲಾಪುರೆ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸ್ಥಳೀಯ ಶಾಸಕ ದುರ್ಯೋಧನ ಐಹೊಳೆ ಹಾಗೂ ದಿವಂಗತ ಬಿ ಆರ್ ಸಂಗಪ್ಪಗೋಳ ಅವರಿಂದ ಮಜಲಟ್ಟಿ ಪಿಯು ಕಾಲೇಜು ಸಾಕಷ್ಟು ಅಭಿವೃದ್ಧಿಯಾಗಿದ್ದರೂ ಉಪನ್ಯಾಸಕರ ಹಾಗೂ ಬೋಧಕೇತರ ಸಿಬ್ಬಂದಿಯ ಕೊರತೆ ನೀಗಿಸಿದಲ್ಲಿ ಇನ್ನೂ ಗುಣಮಟ್ಟದ ಶಿಕ್ಷಣವನ್ನು ನೀಡಬಹುದಾಗಿದೆ.
ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲಿರುವ ಮಜಲಟ್ಟಿಯ ಸರ್ಕಾರಿ ಪಿಯು ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದ್ದು ಈಗಾಗಲೇ ಸಾಕಷ್ಟು ಕೊಠಡಿಗಳನ್ನು ಮಂಜೂರಾತಿ ಮಾಡಿಕೊಂಡು ಬರಲಾಗಿದ್ದು ಅವುಗಳ ಕಾಮಗಾರಿ ಪ್ರಗತಿಯಲ್ಲಿದೆ.ದುಯೋರ್ಧನ ಐಹೊಳೆ, ಶಾಸಕರು ರಾಯಬಾಗ ಮತಕ್ಷೇತ್ರ
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರ ಹಾಗೂ ಬೋಧಕೇತರ ಸಿಬ್ಬಂದಿಯ ನೇಮಕಾತಿಯು ಅವಶ್ಯಕವಾಗಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಆನಂದ ಕೋಳಿ, ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಮಜಲಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.