ADVERTISEMENT

ಎಂಎಸ್ಸಿಗಾಗಿ ನೌಕರಿ ಕಳೆದುಕೊಂಡಿದ್ದ ಶ್ರೀ ಥಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಅಮೆರಿಕ ಸಂಸತ್ತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 10:21 IST
Last Updated 5 ನವೆಂಬರ್ 2020, 10:21 IST
ಶ್ರೀ ಥಾಣೇದಾರ (ಅವರ ಟ್ವಿಟರ್ ಖಾತೆಯ ಫೋಟೊ)
ಶ್ರೀ ಥಾಣೇದಾರ (ಅವರ ಟ್ವಿಟರ್ ಖಾತೆಯ ಫೋಟೊ)   

ಬೆಳಗಾವಿ: ಮಿಷಿಗನ್ ಕ್ಷೇತ್ರದಿಂದ ಅಮೆರಿಕದ ಸಂಸತ್ತಿನ ಪ್ರತಿನಿಧಿಗಳ ಸಭೆಗೆ ಚುನಾಯಿತರಾಗಿರುವ ವಿಜ್ಞಾನಿ ಹಾಗೂ ಅಲ್ಲಿನ ಶ್ರೀಮಂತ ಉದ್ಯಮಿಯೂ ಆಗಿರುವ ಶ್ರೀ ಥಾಣೇದಾರ ಅವರಿಗೆ ಬೆಳಗಾವಿಯ ನಂಟಿದೆ. ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಪಡೆಯುವುದಕ್ಕೋಸ್ಕರ ಬ್ಯಾಂಕ್ ನೌಕರಿ ಕಳೆದುಕೊಂಡಿದ್ದ ಅವರು, ಈಗ ಸ್ವಂತ ಉದ್ಯಮಸ್ಥಾಪಿಸಿ ನೂರಾರು ಮಂದಿಗೆ ಕೆಲಸ ಕೊಟ್ಟಿದ್ದಾರೆ.

ಇಲ್ಲಿನ ಶಹಾಪುರದ ಮೀರಾಪುರ ಗಲ್ಲಿಯಲ್ಲಿದ್ದ ಅವರು, ಸಾಧಾರಣ ಕುಟುಂಬದವರಾದರೂ ತಮ್ಮ ಪ್ರತಿಭೆಯಿಂದಾಗಿ ಮೇಲೆ ಬಂದು, ಅಮೆರಿಕದಲ್ಲಿ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿರುವುದು ವಿಶೇಷ. ಆರು ಮಕ್ಕಳ ಕುಟುಂಬದಲ್ಲಿ ಒಬ್ಬರಾಗಿದ್ದ ಅವರುಶಿಕ್ಷಣ ಮತ್ತು ಹಣದ ಮಹತ್ವ ಚಿಕ್ಕಂದಿನಿಂದಲೇ ಅರಿತಿದ್ದರು. ಚಿಂತಾಮಣರಾವ್ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 55ರಷ್ಟು ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದರು.

18ನೇ ವಯಸ್ಸಿನಲ್ಲಿ ವಿಜಯಪುರದ ಬ್ಯಾಂಕೊಂದರಲ್ಲಿ ನೌಕರಿಗೆ ಸೇರಿದ್ದರು. ಕೆಲಸ ಮಾಡುತ್ತಲೇ ಎಂ.ಎಸ್ಸಿ. ಪದವಿ ಪಡೆಯಬೇಕು ಎನ್ನುವುದು ಬಯಕೆಯಾಗಿತ್ತು. ಆದರೆ, ಧಾರವಾಡದ ಕಾಲೇಜಿನ ಪ್ರಾಂಶುಪಾಲರು ಅವರಿಗೆ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಕುಲಪತಿಯ ಬಳಿಯಿಂದ ಅನುಮತಿ ಪಡೆದಿದ್ದರು. ಆದರೆ, ಇನ್ನೊಂದೆಡೆ 15 ದಿನಗಳ ರಜೆ ಮಂಜೂರು ಮಾಡಲು ಬ್ಯಾಂಕ್‌ ಅಧಿಕಾರಿಗಳು ನಿರಾಕರಿಸಿದ್ದರು. ಆದರೂ ಅವರು ಧಾರವಾಡದಲ್ಲಿ ಎಂ.ಎಸ್ಸಿ. ಪರೀಕ್ಷೆಗೆ ಹಾಜರಾಗಿದ್ದರು. ಇದರಿಂದಾಗಿ ಬ್ಯಾಂಕ್‌ನವರು ಅನುಮತಿ ಇಲ್ಲದೆ ಗೈರುಹಾಜರಿ ಎಂದು ಪರಿಗಣಿಸಿ ಅವರನ್ನು ಕೆಲಸದಿಂದ ತೆಗೆದಿದ್ದರು ಎನ್ನುವ ಸಂಗತಿಯನ್ನು ದಶಕದ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದಾಗ ಸ್ಥಳೀಯ ಜಾಲತಾಣದೊಂದಿಗೆ ಹಂಚಿಕೊಂಡಿದ್ದರು.

ADVERTISEMENT

1977ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1979ರಲ್ಲಿ ಅಮೆರಿಕಕ್ಕೆ ತೆರಳಿದ ಅವರು ಆಗಿನಿಂದಲೂ ಅಲ್ಲಿಯೇ ಉಳಿದಿದ್ದಾರೆ. 1982ರಲ್ಲಿ ಅಲ್ಲಿಯೇ ಪಾಲಿಮರ್ ಕೆಮಿಸ್ಟ್ರಿ ವಿಷಯದಲ್ಲಿ ಪಿಎಚ್‌.ಡಿ. ಪದವಿ ಗಳಿಸಿದ್ದಾರೆ. 1982ರಿಂದ 1984ರವೆಗೆ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ (ಪೋಸ್‌–ಡಾಕ್ಟರಲ್ ಸ್ಕಾಲರ್ ಆಗಿ) ಕೆಲಸ ಮಾಡಿದ್ದರು. 1984ರಿಂದ 1990ರವರೆಗೆ ಪಾಲಿಮರ್ ಸಿಂಥೆಸಿಸ್ ಕೆಮಿಸ್ಟ್ ಹಾಗೂ ಪ್ರಾಜೆಕ್ಟ್ ಲೀಡರ್‌ ಆಗಿ ಪೆಟ್ರೊಲೈಟ್ ಕಾರ್ಪೊರೇಷನ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ಸ್ವಂತ ಉದ್ಯಮ ಆರಂಭಿಸುವ ಮೂಲಕ ಉದ್ಯಮಿಯಾಗಿದ್ದಾರೆ. 65ರ ಹರೆಯದ ಶ್ರೀ ಎರಡು ವರ್ಷಗಳ ಹಿಂದೆ ಅಮೆರಿಕದಲ್ಲಿ ರಾಜ್ಯಪಾಲರ ಹುದ್ದೆಗೂ ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.