ADVERTISEMENT

ಬೆಳಗಾವಿ: ಸಿದ್ದನಕೊಳ್ಳಕ್ಕೆ ‘ಖಾತ್ರಿ’ಯಲ್ಲಿ ಕಾಯಕಲ್ಪ

ಗಣಿಕೊಪ್ಪ: ಮರಿಕಟ್ಟಿ ಗ್ರಾಮ ಪಂಚಾಯಿತಿಯಿಂದ ಕ್ರಮ

ಎಂ.ಮಹೇಶ
Published 9 ಡಿಸೆಂಬರ್ 2020, 19:30 IST
Last Updated 9 ಡಿಸೆಂಬರ್ 2020, 19:30 IST
ಬೆಳಗಾವಿ ತಾಲ್ಲೂಕು ಗಣಿಕೊಪ್ಪದಲ್ಲಿ ಸಿದ್ದನಕೊಳ್ಳ ಕಲ್ಯಾಣಿಗೆ ಪುನಶ್ಚೇತನ ನೀಡುವ ಕಾಮಗಾರಿ ಆರಂಭವಾಗಿದೆ
ಬೆಳಗಾವಿ ತಾಲ್ಲೂಕು ಗಣಿಕೊಪ್ಪದಲ್ಲಿ ಸಿದ್ದನಕೊಳ್ಳ ಕಲ್ಯಾಣಿಗೆ ಪುನಶ್ಚೇತನ ನೀಡುವ ಕಾಮಗಾರಿ ಆರಂಭವಾಗಿದೆ   

ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ಮರೀಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣಿಕೊಪ್ಪದ ಸಿದ್ದನಕೊಳ್ಳ (ಕಲ್ಯಾಣಿ) ದೇವಸ್ಥಾನಕ್ಕೆ ಕಾಯಕಲ್ಪ ನೀಡುವ ಕಾರ್ಯವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಐತಿಹಾಸಿಕ ಹಿನ್ನೆಲೆ ಹಾಗೂ ಮಹತ್ವ ಹೊಂದಿರುವ ಈ ಪುರಾತನ ಸ್ಥಳ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.

ಅಲ್ಲಿನ ಪುಷ್ಕರಿಣಿಯಲ್ಲಿ ವರ್ಷದ ಎಲ್ಲ ದಿನವೂ ನೀರು ಲಭ್ಯವಿರುತ್ತದೆ ಎನ್ನುವುದು ವಿಶೇಷ. ಆ ಪುಷ್ಕರಿಣಿಯು ಹೂಳಿನಿಂದ ತುಂಬಿತ್ತು. ಪುರಾತನ ತಾಣವೊಂದು ನಿಷ್ಕಾಳಜಿಯಿಂದ ನಶಿಸಿ ಹೋಗಬಾರದೆಂಬ ಕಾಳಜಿಯಿಂದ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಪ್ರಾಚೀನ ವಾಸ್ತುಶಿಲ್ಪ:

ಸಿದ್ದೇಶ್ವರನ ಕೊಳವಾಗಿದ್ದ ಇದು ಆಡುಮಾತಿನಲ್ಲಿ ಸಿದ್ದನಕೊಳ್ಳವೆಂದೇ ಹೆಸರಾಗಿದೆ. ರಾಜರ ಆಳ್ವಿಕೆಯ ಕಾಲದಲ್ಲಿದ್ದ ಸಾಧುಗಳು ತಮ್ಮ ದೈನಂದಿನ ಜಪ, ತಪ ಹಾಗೂ ಸಿದ್ಧಿಗಾಗಿ ಪ್ರಶಾಂತವಾದ ಈ ಸ್ಥಳ ಆಯ್ಕೆ ಮಾಡಿ ತಮಗೆ ಬೇಕಾದ ಅನುಕೂಲಗಳನ್ನು ರಾಜರು ಮತ್ತು ಭಕ್ತರಿಂದ ಮಾಡಿಸಿಕೊಂಡಿದ್ದರು. ಪ್ರಾಚೀನ ವಾಸ್ತುಶಿಲ್ಪ ಕಲೆ ಒಳಗೊಂಡಿರುವ ಅಲ್ಲಿರುವ ಪುಷ್ಕರಿಣಿ ನೂರಾರು ವರ್ಷಗಳ ಇತಿಹಾಸವನ್ನು ಸಾರುತ್ತಿದೆ. ಇದನ್ನು 10ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಕದಂಬರು, ರಾಷ್ಟ್ರಕೂಟರು ಈ ಪ್ರಾಂತ್ಯದಲ್ಲಿ ನಡೆಸಿದ ಅಲ್ಲಿನ ಪುಷ್ಕರಿಣಿಯ ವಾಸ್ತುಶಿಲ್ಪ ಸಾಕ್ಷಿಯಾಗಿದೆ.

‘ಸಿದ್ದೇಶ್ವರರು ತಪಸ್ಸಿನ ಶಕ್ತಿಯಿಂದ ಮುಕ್ತಿ ಮಾರ್ಗವನ್ನು ಅನುಸರಿಸಿ ಮೋಕ್ಷ ಪಡೆದ ಸ್ಥಳ ಇದಾಗಿರಬಹುದು ಎನ್ನುವುದು ಪುಷ್ಕರಿಣಿಯ ಹಿಂಭಾಗದಲ್ಲಿರುವ ಗದ್ದುಗೆಯಿಂದ ತಿಳಿದುಬರುತ್ತದೆ. ಪೂರ್ವ ಆಗ್ನೇಯ ಭಾಗದಲ್ಲಿರುವ ಚಿಕ್ಕದಾದ ದ್ವಾರವು, ಅಲ್ಲಿ ಸಿದ್ಧರು ಜೀವಂತ ಸಮಾಧಿಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ’ ಎನ್ನುತ್ತಾರೆ ಗ್ರಾಮದ ಹಿರಿಯರು. ‘ಪುಷ್ಕರಿಣಿಯಲ್ಲಿ ವರ್ಷದ ಎಲ್ಲ ಋತುವಿನಲ್ಲೂ ನೀರಿರುತ್ತದೆ. ಇದು ಸಿದ್ದೇಶ್ವರರರ ಪವಾಡ’ ಎನ್ನುವುದು ಊರಿನವರ ನಂಬಿಕೆಯಾಗಿದೆ.

ಮುಖಮಂಟಪ: ಪುಷ್ಕರಿಣಿಯ ಮುಂಭಾಗದ ಈಶಾನ್ಯ ಭಾಗದಲ್ಲಿರುವ ಆಲಯದಲ್ಲಿ ಗದ್ದುಗೆಯಾಕಾರದ ಚಿಕ್ಕ ಕೋಣೆ ಇದೆ. ಅದರ ದ್ವಾರವು ಕಲ್ಲಿನಿಂದ ನಿರ್ಮಿತವಾಗಿದೆ. ಗರ್ಭಾಂಕಣದಲ್ಲಿ ಸಿದ್ಧಲಿಂಗೇಶ್ವರರು ನಿರ್ಮಿಸಿದ ಶಿವಸಾಲಿಗ್ರಾಮವಿದೆ. ಅದರ ಮೇಲ್ಭಾಗದಲ್ಲಿ ಶಿವಪಾರ್ವತಿಯರ ಚಿತ್ರವನ್ನು ಉಬ್ಬುಗೆತ್ತನೆಯಲ್ಲಿ ರಚಿಸಲಾಗಿದೆ. ಗರ್ಭಾಂಕಣಕ್ಕೆ ಹೊಂದಿಕೊಂಡಂತೆ ಬಲಬದಿಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮುಂದೆ ವಿಶಾಲವಾದ ಮಹಾಮಂಟಪವಿದ್ದು, ಮಧ್ಯದಲ್ಲಿ ಮಹಾನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಹೊರ ಭಾಗದಲ್ಲಿ ಮುಖಮಂಟಪವಿದೆ.

ಹಿಂದೊಮ್ಮೆ ಸಿದ್ಧನಕೊಳ್ಳದ ಆವರಣದಲ್ಲಿ ಯುವ ಬ್ರಿಗೇಡ್‌ನವರು ಶ್ರಮದಾನ ಮಾಡಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು. ರಾಮನಗರ ಜಿಲ್ಲೆಯ ಕೆಂಗಲ್‌ನ ಜೆ.ಸಿ. ವಿಶ್ವನಾಥಾಚಾರ್ಯ ಸ್ಥಪತಿ ಎನ್ನುವವರು ಈ ಜಾಗದ ಐತಿಹಾಸಿಕ ಹಿನ್ನೆಲೆ ಬಗ್ಗೆ ಸಂಶೋಧನೆ ನಡೆಸಿದ್ದರು. ‘ಈ ಪುಣ್ಯಸ್ಥಳವು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ನಮ್ಮಲ್ಲಿರುವ ಅಂಧಕಾರದಿಂದ ಮಾತ್ರವೇ ಹೊರತು, ಅಲ್ಲಿರುವ ಶಕ್ತಿ ಇಂದಿಗೂ ಕಡಿಮೆಯಾಗಿಲ್ಲ. ಆ ಜಾಗಕ್ಕೆ ಕಾಯಕಲ್ಪ ನೀಡಬೇಕು’ ಎಂದು ಗ್ರಾಮದ ಮುಖಂಡರೊಂದಿಗೆ ಚರ್ಚಿಸಿದ್ದರು.

ಇತ್ತೀಚೆಗೆ ಅಲ್ಲಿ ಪುನರುಜ್ಜೀವನ ಕಾಮಗಾರಿ ಆರಂಭವಾಗಿದೆ. ಗ್ರಾಮದವರೇ ಆದ ಹಾಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಚಾಲನೆ ನೀಡಿದ್ದಾರೆ.

‘ಸಿದ್ದನಕೊಳ್ಳಕ್ಕೆ ಮರುಜೀವ ನೀಡಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 12 ಮಂದಿ ಸ್ಥಳೀಯರು ಕಾರ್ಯನಿರ್ವಹಿಸುತ್ತಿದ್ದಾರೆ. 1.50 ಲಕ್ಷ ಮಾನವ ದಿನಗಳನ್ನು ಸೃಜಿಸುವ ಉದ್ದೇಶ ಹೊಂದಲಾಗಿದೆ. ಸದ್ಯಕ್ಕೆ ₹ 9 ಲಕ್ಷ ವಿನಿಯೋಗಿಸಲು ಉದ್ದೇಶಿಸಲಾಗಿದೆ. ಪೇವರ್ಸ್‌ ಅಳವಡಿಸಿ, ಉದ್ಯಾನ ಅಭಿವೃದ್ಧಿಪಡಿಸುವುದಕ್ಕೂ ಯೋಜಿಸಲಾಗಿದೆ’ ಎಂದು ಪಿಡಿಒ ಮಂಜುಳಾ ಅಂಗಡಿ ‘ಪ್ರಜಾವಾಣಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.