ನಾಗನೂರ(ಬೆಳಗಾವಿ): 'ನೆರೆ ಸಂತ್ರಸ್ತರ ಸಂಕಷ್ಟ ಕೇಳಲು ಬಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶನಿವಾರ ಬೆಳಗಾವಿಗೆ ಬಿರಿಯಾನಿ ತಿನ್ನಲು ಬರುತ್ತಿದ್ದಾರೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು.
ಬೈಲಹೊಂಗಲ ತಾಲ್ಲೂಕಿನ ನಾಗನೂರ ಗ್ರಾಮದಲ್ಲಿ ಶುಕ್ರವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, 'ಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಆಗ ಜನರ ಕಷ್ಟ ಕೇಳಲು ಬಾರದವರು ಈಗ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬರುತ್ತಿದ್ದಾರೆ. ಅಲ್ಲಿಗೆ ಬಂದು ಬಿರಿಯಾನಿ ತಿಂದು ಹೋಗುತ್ತಾರೆ. ಆದರೆ, ನಾವು ರೈತರ ಸಮಸ್ಯೆ ಆಲಿಕೆಗಾಗಿ ಬಂದಿದ್ದೇವೆ' ಎಂದರು.
'ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿ ಎರಡು ತಿಂಗಳಾಗಿದೆ. ಆಗ ರೈತರ ಜಮೀನುಗಳತ್ತ ಸುಳಿಯದ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಇಂದು ನಾವು ಬಂದಿದ್ದೇವೆ ಇಲ್ಲಿಗೆ ಧಾವಿಸಿದ್ದಾರೆ' ಎಂದು ದೂರಿದರು.
'ರಾಜ್ಯದಲ್ಲಿ ಮಳೆಯಿಂದ ಆಗಿರುವ ಹಾನಿಗೆ ಎನ್‌ಡಿಆರ್‌ಎಫ್ ಅನುದಾನ ನೀಡಲಾಗಿದೆ. ವಿಪತ್ತು ನಿರ್ವಹಣೆಗಾಗಿ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆ. ಆದರೆ, ರಾಜ್ಯ ಸರ್ಕಾರ ಅದನ್ನು ತನ್ನ ಉಚಿತ ಯೋಜನೆಗಳಿಗೆ ಬಳಸಿಕೊಂಡಿದೆ' ಎಂದು ಆಪಾದಿಸಿದರು.
'ಕೇಂದ್ರ ಸರ್ಕಾರದಿಂದ ಈ ಹೆಚ್ಚುವರಿ ಅನುದಾನ ನೀಡಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಹಾನಿಯ ವರದಿ ಸಲ್ಲಿಸಬೇಕಿದೆ. ಆದರೆ, ವರದಿ ಸಲ್ಲಿಸದೇ ಕೇಂದ್ರ ಹಣ ಕೊಡುತ್ತಿಲ್ಲ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ' ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.