ADVERTISEMENT

ಸಿದ್ದರಾಮಯ್ಯಗೆ ಅರಳು–ಮರಳು: ಶೆಟ್ಟರ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 14:50 IST
Last Updated 21 ಏಪ್ರಿಲ್ 2019, 14:50 IST
   

ಬೆಳಗಾವಿ: ‘ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಿದುಳಿಲ್ಲ. ಅರಳು-ಮರುಳು ಜಾಸ್ತಿಯಾಗಿದೆ’ ಎಂದು ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಆರೋಪಿಸಿದರು.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಶೋಭಾ ಕರಂದ್ಲಾಜೆ ಹಾಗೂ ಕೆ.ಎಸ್. ಈಶ್ವರಪ್ಪ ಅವರನ್ನು ಪೆದ್ದ, ಬುದ್ಧಿ ಇಲ್ಲದವರು ಎನ್ನುವುದು ಅವರಿಗೆ ಶೋಭೆ ತರುವಂಥದ್ದಲ್ಲ’ ಎಂದು ತಿರುಗೇಟು ನೀಡಿದರು.

‘ಲೋಕಾಯುಕ್ತದ ಹಲ್ಲುಗಳನ್ನು ಕಿತ್ತು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚಿಸಿದ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ನವರಿಗೆ ವೀರಶೈವ-ಲಿಂಗಾಯತ ಧರ್ಮ ಹಾಗೂ ಕಳಸಾ– ಬಂಡೂರಿ ವಿಷಯ ನೆನಪಿಗೆ ಬರುತ್ತದೆ. ಕಳಸಾ–ಬಂಡೂರಿ ಯೋಜನೆ ಕುರಿತು ಕೇಂದ್ರಕ್ಕೆ ಶಿಪಾರಸು ಮಾಡಿದ್ದರೆ, ಪತ್ರ ಬಹಿರಂಗಪಡಿಸಿ’ ಎಂದು ಸವಾಲು ಹಾಕಿದರು.

ADVERTISEMENT

‘ಲಿಂಗಾಯತ ಧರ್ಮದ ಹೋರಾಟವನ್ನು ಎಲ್ಲ ಜಿಲ್ಲೆಗಳಲ್ಲೂ ನಡೆಸಿದರು. ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ ಮೊದಲಾದವರು ಸಿದ್ದರಾಮಯ್ಯ ಕೈಗೊಂಬೆಗಳಂತೆ ಕೆಲಸ ಮಾಡಿದರು. ಅವರು ಲಿಂಗಾಯತ ನಾಯಕರನ್ನು ತುಳಿದ ಉದಾಹರಣೆಗಳು ಬಹಳಷ್ಟಿವೆ. ಕಾಂಗ್ರೆಸ್‌ನ ನಾಯಕ ಎಚ್.ಕೆ. ಪಾಟೀಲ ಅವರು ಲಿಂಗಾಯತ ಹೌದೋ ಅಲ್ಲವೋ ಎನ್ನುವುದನ್ನು ಕಾಂಗ್ರೆಸ್ ತಿಳಿದುಕೊಳ್ಳಲಿ’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದರೆ ಸ್ವಾಗತಿಸುತ್ತೇವೆ. ಬಿಜೆಪಿಯನ್ನು ಅವರು ಸಂಪರ್ಕಿಸಿಲ್ಲ. ನಾವು ಆಪರೇಷನ್ ಕಮಲ ನಡೆಸುತ್ತಿಲ್ಲ. ಸಮ್ಮಿಶ್ರ ಸರ್ಕಾರದವರು ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.