ADVERTISEMENT

ಗೋಕಾಕ| ಆಡಂಬರದ ವಿವಾಹಗಳಿಗೆ ಕಡಿವಾಣ ಹಾಕಿ: ಹಜರತ್ ಮೌಲಾನಾ ಖಲೀಲುರ್ರ ರಹಮಾನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 7:38 IST
Last Updated 19 ಜನವರಿ 2026, 7:38 IST
ಗೋಕಾಕದಲ್ಲಿ ಶನಿವಾರ ರಹಮಾನ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರನ್ನು ಉದ್ದೇಶಿಸಿ ರಹಮಾನ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಮುಂಬೈನ ಹಜರತ್ ಮೌಲಾನಾ ಖಲೀಲುರ್ರ ರಹಮಾನ ಸಜ್ಜಾದ ನೋಮಾನಿ ಮಾತನಾಡಿದರು
ಗೋಕಾಕದಲ್ಲಿ ಶನಿವಾರ ರಹಮಾನ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರನ್ನು ಉದ್ದೇಶಿಸಿ ರಹಮಾನ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಮುಂಬೈನ ಹಜರತ್ ಮೌಲಾನಾ ಖಲೀಲುರ್ರ ರಹಮಾನ ಸಜ್ಜಾದ ನೋಮಾನಿ ಮಾತನಾಡಿದರು   

ಗೋಕಾಕ: ಬಡವರ ಯೋಗಕ್ಷೇಮ ವಿಚಾರಿಸುವುದು ಮಾನವ ಧರ್ಮದ ಅವಿಭಾಜ್ಯ ಅಂಗವಾಗಿದೆ ಎಂದು ರಹಮಾನ್ ಫೌಂಡೇಷನ್‌ ಸಂಸ್ಥಾಪಕ ಅಧ್ಯಕ್ಷ ಮುಂಬೈನ ಹಜರತ್ ಮೌಲಾನಾ ಖಲೀಲುರ್ರ ರಹಮಾನ ಸಜ್ಜಾದ ನೋಮಾನಿ ಹೇಳಿದರು.

ಶನಿವಾರ ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ಸ್ಥಳೀಯ ರಹಮಾನ್ ಫೌಂಡೇಷನ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮದ ಚಕ್ರವ್ಯೂಹದ ಒಳ ಪ್ರವೇಶಿಸಿ ಧರ್ಮ ಹೇಳಿದ ಸತ್ಕಾರ್ಯಗಳನ್ನು ಮಾಡಬೇಕು. ಮಕ್ಕಳು ಆಧುನಿಕ ಯುಗದ ಸೆಳೆತಕ್ಕೆ ಸಿಲುಕಿ ಯಾವಕಡೆ ವಾಲುತ್ತಿದ್ದಾರೆ ಎಂಬುದರ ಕಡೆ ಗಮನ ಹರಿಸುವುದು ಪ್ರತಿಯೊಬ್ಬ ಪಾಲಕ-ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ನುಡಿದರು.

ಬಹುಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಆಡಂಬರದ ಮದುವೆಗಳು ಸಮಾಜದಲ್ಲಿ ನಡೆಯುತ್ತಿವೆ. ಇದರಿಂದ ಬಡವರು ಸಾಲ, ಸೂಲ ಮಾಡಿ ತಮ್ಮ ಮಕ್ಕಳ ಮಧುವೆಗಳನ್ನು ಮಾಡಿ ನಂತರ ಸಾಲ ತೀರಿಸಲು ಹೆಣಗಾಡುವ ನಿದರ್ಶನಗಳನ್ನು ನಾವೆಲ್ಲರೂ ಕಂಡಿದ್ದೇವೆ. ಅಂಥ ಸಮಾಜದ ಸ್ವಾಸ್ಥ್ಯ ಕದಡುವ ವ್ಯವಸ್ಥೆಯಿಂದ ಹೊರಬರಲು ಶ್ರೀಮಂತರೆನ್ನಿಸಿಕೊಂಡ ನಾವು ಬಡವರ ನೆರವಿಗೆ ಧಾವಿಸಬೇಕಾಗಿದೆ. ಆ ನಿಟ್ಟಿನಲ್ಲಿ ಇಡೀ ದೇಶದಲ್ಲಿ ರಹಮಾನ್ ಫೌಂಡೇಷನ್‌ ವತಿಯಿಂದ ಬಡವರನ್ನು ಗುರ್ತಿಸಿ ಅವರ ವಿವಾಹವನ್ನು ಸರಳವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಆಡಂಬರದ ವಿವಾಹಗಳನ್ನು ಮಾಡದೆ ಸರಳ ವಿವಾಹಗಳನ್ನು ಮಾಡಿ ಸಾಮಾಜದಲ್ಲಿ ಬಡವರು ಸಹ ಮುಖ್ಯವಾಹಿನಿಗೆ ಬಂದು ತಮ್ಮ ಮಕ್ಕಳ ವಿವಾಹಗಳನ್ನು ಮಾಡುವಂತೆ ಪ್ರೇರೇಪಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ 20 ಬಡ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಹಾಗೂ ಅಲ್ಪಸಂಖ್ಯಾತ ಇಲಾಖೆಯಿಂದ ತಲಾ ಒಬ್ಬ ವಧುವಿಗೆ ₹50 ಸಾವಿರ ಧನ ಸಹಾಯ ವಿತರಿಸಲಾಯಿತು.

ಸಮಾರಂಭದಲ್ಲಿ ಹಜರತ ಮೌಲಾನಾ ಮುಫ್ತಿ ಅಬ್ದುಲ್ ಹಮೀದ್ ಸಾಬ, ಹಜತರ ಮೌಲಾನಾ ಮುಫ್ತಿ ಅಬ್ದುಲ್ ಅಜೀಜಸಾಬ,ಮುಫ್ತಿ ಖಾಲಿದಸಾಬ, ಮೌಲಾನಾ ಅಬ್ಬುಲಾಸಾಬ, ಹಜರತ ಮೌಲಾನಾ ಸಲೀಮಸಾಬ, ಮೌಲಾನ ಅನ್ಸಾರ ಅಜೀಜ ನದ್ವಿ, ಮುಖಂಡರುಗಳಾದ ಇಲಾಹಿ ಖೈರದಿ, ಇಸಾಕ ಸೌದಾಗರ, ಇಸ್ಮಾಯಿಲ್ ಗೋಕಾಕ, ಆರೀಫ ಪೀರಜಾದೆ, ಕುತಬುದ್ದೀನ ಗೋಕಾಕ, ಹಾಜಿ ಕುತುಬದ್ದೀನ ಬಸ್ಸಾಪೂರಿ, ಮೊಹಸೀನ ಖೋಜಾ, ಅಬ್ದುಲ್‌ರಹಮಾನ ದೇಸಾಯಿ, ಖಾರಿ ಯಾಕೂಬಸಾಬ ಮೊದಲಾದವರು ಪಾಲ್ಗೊಂಡು ವಧು-ವರರನ್ನು ಆಶೀರ್ವದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.