ADVERTISEMENT

ಬೆಳಗಾವಿ: ಇಳಿಸಂಜೆಯ ತಂಗಾಳಿಗೆ ಹೃಣ್ಮನ ತಣಿಸಿದ ಸೋನು ನಿಗಮ್‌ ಕಂಠಸಿರಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 16:15 IST
Last Updated 25 ಮಾರ್ಚ್ 2025, 16:15 IST
ಬೆಳಗಾವಿಯ ಜಿಐಟಿಯಲ್ಲಿ ಈಚೆಗೆ ಗಾಯಕ ಸೋನು ನಿಗಮ್‌ ಗಾಯನ ಮೋಡಿ
ಬೆಳಗಾವಿಯ ಜಿಐಟಿಯಲ್ಲಿ ಈಚೆಗೆ ಗಾಯಕ ಸೋನು ನಿಗಮ್‌ ಗಾಯನ ಮೋಡಿ   

ಬೆಳಗಾವಿ: ಒಂದರ ಹಿಂದೊಂದು ಮೂಡಿ ಬರುತ್ತಿದ್ದ ಯುಗಳ ಗೀತೆಗಳು, ಹಿಂದಿ ಚಿತ್ರಗೀತೆಗಳ ಸೊಗಸಿಗೆ ಹುಚ್ಚೆದ್ದು ಕುಣಿದ ಯುವ ಮನಸ್ಸುಗಳು, ಹೃದಯ ತಣಿಸುವ ಗೀತೆಯ ಹಿಂದಯೇ ಹೃದಯ ಕುಣಿಸುವ ಇನ್ನೊಂದು ಗೀತೆ. ಶಾಸ್ತ್ರೀಯ, ಪಾಶ್ಚಿಮಾತ್ಯ, ದೇಸಿ ಸಂಗೀತದ ಸಮ್ಮಿಲನ, ಕಿಕ್ಕಿರಿದು ಸೇರಿದ್ದ ಜನಸ್ತೋಮದ ಮಧ್ಯದಿಂದ ಹರ್ಷದ ಭೋರ್ಗರೆತ. ತಡರಾತ್ರಿಯವರೆಗೂ ಹಾಡು– ಕುಣಿತ– ಸಂಭ್ರಮ– ಸಿಳ್ಳೆ– ಚಪ್ಪಾಳೆಗಳ ವರ್ಷಧಾರೆ. ಇಳಿಸಂಜೆಯ ತಂಗಾಳಿಗೆ ಹೃಣ್ಮನ ತಣಿಸಿದ ಕಂಠಸಿರಿ...

ಈ ಸಂಭ್ರಮ ಕಂಡುಬಂದಿದ್ದು ಇಲ್ಲಿನ ಗೋಗಟೆ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ ಈಚೆಗೆ ಆಯೋಜಿಸಿದ್ದ ‘ರಂಗ ದೇ ಬಸಂತಿ’ ಸಂಭ್ರಮದಲ್ಲಿ. ಕಾಲೇಜಿನ ‘ಔರಾ’ ಉತ್ಸವದ ಝಲಕ್‌ ಇದು.

ಕಾಲೇಜಿನ ಆವರಣದಲ್ಲಿ ವಿಶಿಷ್ಟವಾಗಿ ವಿನ್ಯಾಸ ಮಾಡಿದ್ದ ಬೃಹತ್‌ ವೇದಿಕೆ ಮೇಲೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್‌ ಅವರ ಗಾಯನ ಮೋಡಿ ಮಾಡಿತು. ಝಗಮಗಿಸುವ ದೀಪಾಲಂಕಾರ, ವರ್ಣರಂಜಿತ ಎಲ್‌ಇಡಿ ಪರದೆ, ಮೈದಾನದ ಸುತ್ತಲೂ ಕಲರ್‌ಫುಲ್‌ ದೀಪಗಳ ಆಡಂಬರ, ತಿಂಡಿಪೋತರಿಗಾಗಿ ಫುಡ್‌ ಕೋಟ್... ಎಲ್ಲವೂ ಅಲ್ಲಿ ಮೇಳೈಸಿದ್ದವು.

ADVERTISEMENT

ಇಳಿಸಂಜೆಯ ಹೊತ್ತಿಗೆ ಸೋನು ನಿಗಮ್‌ ವೇದಿಕೆಗೆ ಬರುತ್ತಿದ್ದಂತೆಯೇ ಪ್ರೇಕ್ಷಕರ ಗ್ಯಾಲರಿಯಿಂದ ಕೂಗಾಟ, ಸಿಳ್ಳೆ, ಚಪ್ಪಾಳೆಗಳ ಮಳೆಯೇ ಸುರಿಯಿತು. ನೆಚ್ಚಿನ ಗಾಯಕನನ್ನು ಕಣ್ಣುತುಂಬಿಕೊಂಡ ಯುವಕ– ಯುವತಿಯರು ಇನ್ನಿಲ್ಲದಂತೆ ಸಂಭ್ರಮಿಸಿದರು. ಬೃಹತ್‌ ಪರದೆಯೆ ಮೇಲೆ ಗಾಯಕ ಹೆಜ್ಜೆ ಹಾಕಿದಾಗ ಅವರಿಗಿಂತಲೂ ಹುಮ್ಮಸ್ಸಿನಿಂದ ಕುಣಿದು ಸಂಭ್ರಮಿಸಿದರು.

ಆರಂಭದಲ್ಲಿ ಹಿಂದಿ ಚಲನಚಿತ್ರದ ಗೀತೆಗಳನ್ನು ಒಂದರ ಹಿಂದೊಂದು ಪ್ರಸ್ತುತಪಡಿಸಿದ ಸೋನು, ‘ನಿನ್ನಿಂದಲೇ ನಿನ್ನಿಂದಲೇ...’ ಎಂಬ ಕನ್ನಡ ಹಾಡು ಆರಂಭಿಸುವ ಮೂಲಕ ಪ್ರೇಕ್ಷಕರನ್ನು ಚುಂಪಕ ಶಕ್ತಿಯಂತೆ ಸೆಳೆದರು. ಯುವಜನರ ಹುಮ್ಮಸ್ಸು ಮತ್ತಷ್ಟು ಇಮ್ಮಡಿಯಾಯಿತು. ಪ್ರತಿಯೊಬ್ಬರೂ ತಮ್ಮ ಮೊಬೈಲ್‌ಗಳಲ್ಲಿ ಈ ಕ್ಷಣಗಳನ್ನು ಸೆರೆಹಿಡಿದುಕೊಂಡರು.

ಮೂರು ದಿನಗಳ ಈ ಸಾಂಸ್ಕೃತಿಕ ಉತ್ಸವದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ಸಂಗೀತ, ನಾಟಕ, ಲಲಿತಕಲೆಗಳ ಪ್ರದರ್ಶನ ಮಾತ್ರವಲ್ಲ, ಇ– ಗೇಮಿಂಗ್‌, ರೊಬೊ ಕೌಶಲ ಪ್ರದರ್ಶನವೂ ಸೇರಿದಂತೆ 40 ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಸುಮಾರು 80 ಶಿಕ್ಷಣ ಸಂಸ್ಥೆಗಳಿಂದ 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.