ADVERTISEMENT

Ganesha Chaturthi: ಏಕದಂತನಿಂದ ‘ಶಿಕ್ಷಣ’ದ ಜಾಗೃತಿ

ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮದ ಮೇಲೆ ಬೆಳಕು ಚೆಲ್ಲುವ ಗಣೇಶ

ಪ್ರಜಾವಾಣಿ ವಿಶೇಷ
Published 23 ಸೆಪ್ಟೆಂಬರ್ 2023, 5:21 IST
Last Updated 23 ಸೆಪ್ಟೆಂಬರ್ 2023, 5:21 IST
ಬೆಳಗಾವಿಯ ವಡಗಾವಿಯ ತೆಗ್ಗಿನ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯಲ್ಲಿ ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿ ಗಮನ ಸೆಳೆಯುತ್ತಿದೆ– ಪ್ರಜಾವಾಣಿ ಚಿತ್ರ
ಬೆಳಗಾವಿಯ ವಡಗಾವಿಯ ತೆಗ್ಗಿನ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯಲ್ಲಿ ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿ ಗಮನ ಸೆಳೆಯುತ್ತಿದೆ– ಪ್ರಜಾವಾಣಿ ಚಿತ್ರ   

ಇಮಾಮ್‌ಹುಸೇನ್‌ ಗೂಡುನವರ

ಬೆಳಗಾವಿ: ನಿಮ್ಮ ಮಕ್ಕಳನ್ನು ಮೊಬೈಲ್‌ ಗೀಳಿನಿಂದ ಹೊರತಂದು ಓದುವ ಹವ್ಯಾಸ ಬೆಳೆಸಿ. ಅಕ್ಷರ ಕಲಿಯಬೇಕಾದ ಮಕ್ಕಳನ್ನು ದುಡಿಮೆಗೆ ತಳ್ಳದೆ, ಶಾಲೆಯತ್ತ ಕಳುಹಿಸಿ....

ಇಂತಹ ಹಲವು ಸಾಮಾಜಿಕ ಸಂದೇಶಗಳನ್ನು ನಗರದಲ್ಲಿ ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಸಾರುತ್ತಿವೆ. ಜನರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸುವ ಜತೆಗೆ, ಶಿಕ್ಷಣದ ಮಹತ್ವ ಬಿಂಬಿಸುತ್ತಿವೆ. ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕುವ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ದುಷ್ಪರಿಣಾಮಗಳ ಮೇಲೂ ಬೆಳಕು ಚೆಲ್ಲುತ್ತಿವೆ.

ADVERTISEMENT

ಕಳೆದ 33 ವರ್ಷಗಳಿಂದ ಗಣೇಶನನ್ನು ಪ್ರತಿಷ್ಠಾಪಿಸುತ್ತಿರುವ ಇಲ್ಲಿನ ಕುಲಕರ್ಣಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ, ಈ ಬಾರಿ ಶಿಕ್ಷಣದಿಂದ ವಂಚಿತರಾದ ಬಾಲಕ ಮತ್ತು ಬಾಲಕಿಯು ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಚಿತ್ರಣ ಪ್ರಸ್ತುತಪಡಿಸಿದೆ. ಬಾಲಕನೊಬ್ಬ ತನ್ನ ತಲೆ ಮೇಲೆ ಹೊತ್ತು ಸಾಗುತ್ತಿರುವ ಮೂಟೆಯನ್ನು ಗಣೇಶ ಇಳಿಸುತ್ತಿರುವ ದೃಶ್ಯ ಶಿಕ್ಷಣದ ಮಹತ್ವ ಸಾರುವಂತಿದೆ. ಇದರ ಹಿಂಭಾಗದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಘೋಷಣೆಗಳನ್ನು ಬರೆಯಲಾಗಿದೆ.

‘ಶಿಕ್ಷಣ ಯಾರಿಗೂ ಹೊರೆಯಾಗದಿರಲಿ ಎನ್ನುವ ಕಾರಣಕ್ಕೆ, ಸರ್ಕಾರ ಎಲ್ಲ ಮಕ್ಕಳಿಗೂ ಉಚಿತವಾಗಿ ಪ್ರಾಥಮಿಕ ಶಿಕ್ಷಣ ನೀಡುತ್ತಿದೆ. ಆದರೆ, ಬಡತನ, ಪಾಲಕರ ನಿರಾಸಕ್ತಿ ಕಾರಣಕ್ಕೆ ಕೆಲವು ಮಕ್ಕಳು ಬಾಲ್ಯದಲ್ಲೇ ದುಡಿಮೆಯತ್ತ ಮುಖಮಾಡುತ್ತಿದ್ದಾರೆ. ಅಂತಹವರ ಮನಃ ಪರಿವರ್ತನೆ ಮಾಡಿ, ಶಾಲೆಯತ್ತ ಸೆಳೆಯುವುದೇ ನಮ್ಮ ಉದ್ದೇಶ. ಹಾಗಾಗಿ ಶಿಕ್ಷಣದ ಮಹತ್ವ ಸಾರುವ ಗಣೇಶನನ್ನು ಪ್ರತಿಷ್ಠಾಪಿಸಿದ್ದೇವೆ’ ಎಂದು ಕುಲಕರ್ಣಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅಧ್ಯಕ್ಷ ಸತೀಶ ಗೌರಗೊಂಡ ತಿಳಿಸಿದರು.

‘ಪ್ರತಿವರ್ಷ ಗಣೇಶೋತ್ಸವದಲ್ಲಿ ಸಂಗ್ರಹವಾದ ದೇಣಿಗೆ ಮೊತ್ತದಲ್ಲಿ ಹಲವು ಸಾಮಾಜಿಕ ಚಟುವಟಿಕೆ ಕೈಗೊಳ್ಳುತ್ತೇವೆ. ಈ ಸಲವೂ ಬಡ ವಿದ್ಯಾರ್ಥಿಗಳಿಗೆ ನೆರವಾಗಲಿದ್ದೇವೆ’ ಎಂದರು.

‘37 ವರ್ಷಗಳಿಂದ ನಾವು ಗಣೇಶನನ್ನು ಕೂರಿಸಿ ಪೂಜಿಸುತ್ತಿದ್ದೇವೆ. ಪ್ರತಿವರ್ಷವೂ ಒಂದೊಂದು ಸಂದೇಶ ಸಾರುವ ಚಿತ್ರಣವನ್ನು ಭಕ್ತರ ಮುಂದೆ ತೆರೆದಿಡುತ್ತೇವೆ. ಮಿತಿಮೀರಿ ಬಳಸಿದರೆ ಜಾಲತಾಣಗಳು ಅಪಾಯ ತಂದೊಡುತ್ತವೆ ಎನ್ನುವ ಎಚ್ಚರಿಕೆಯನ್ನು ಈ ಸಲ ಕೊಟ್ಟಿದ್ದೇವೆ’ ಎಂದು ಸೋಮನಾಥ ಎಮ್ಮಿ ಹೇಳಿದರು.

ಬೆಳಗಾವಿಯ ಕುಲಕರ್ಣಿ ಗಲ್ಲಿಯಲ್ಲಿ  ಸಾರ್ವಜನಿಕ ಗಣೇಶೋತ್ಸವ ಮಂಡಳಿ ಸದಸ್ಯರು ಶಿಕ್ಷಣದ ಮಹತ್ವ ಸಾರಿದರು– ಪ್ರಜಾವಾಣಿ ಚಿತ್ರ

ಓದಿನತ್ತ ಸೆಳೆಯುವುದಕ್ಕಾಗಿ... ‘ಇಂದು ತಂದೆ–ತಾಯಿ ಮಕ್ಕಳೆಲ್ಲರೂ ಫೇಸ್‌ಬುಕ್‌ ವಾಟ್ಸ್‌ಆ್ಯಪ್‌ ಟ್ವಿಟ್ಟರ್‌ ಇನ್‌ಸ್ಟಾಗ್ರಾಂ ಯೂಟ್ಯೂಬ್‌ ಮತ್ತಿತರ ಜಾಲತಾಣಗಳನ್ನು ಮಿತಿಮೀರಿ ಬಳಸುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಶಿಕ್ಷಣಕ್ಕೆ ಹೊಡೆತ ಬೀಳುತ್ತಿದೆ. ಕೌಟುಂಬಿಕ ವಾತಾವರಣವೂ ಹದಗೆಡುತ್ತಿದೆ. ಈ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಮಕ್ಕಳನ್ನು ಓದಿನತ್ತ ಸೆಳೆಯುವುದಕ್ಕಾಗಿ ವಿಶಿಷ್ಟವಾದ ಗಣೇಶನ ಮೂರ್ತಿ ಸಿದ್ಧಪಡಿಸಿದ್ದೇವೆ’ ಎಂದು ವಡಗಾವಿಯ ತೆಗ್ಗಿನ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಅಧ್ಯಕ್ಷ ಬಸವರಾಜ ಕಾಮಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.