ಮೂಡಲಗಿ: ಕಲ್ಲೋಳಿಯ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರ ಸಂಸ್ಥೆಯ ಸುಸಜ್ಜಿತ ಕಟ್ಟಡದ ಉದ್ಘಾಟನೆಯು ಅ.4ರಂದು ಮಧ್ಯಾಹ್ನ 3 ಗಂಟೆಗೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಮತ್ತು ಕೇಂದ್ರ ಸಚಿವರ ಉಪಸ್ಥಿತಿಯಲ್ಲಿ ಜರುಗಲಿದೆ.
ಗ್ರಾಮೀಣ ಜನರನ್ನು ಆರ್ಥಿಕವಾಗಿ ಬೆಳೆಸುವ ಉದ್ಧೇಶದಿಂದ ಸಂಸ್ಥಾಪಕ ಅಧ್ಯಕ್ಷ ಮತ್ತು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಮತ್ತು ಸಮಾನ ಮನಸ್ಕರು ಸೇರಿ 2002ರಲ್ಲಿ 320 ಸದಸ್ಯರು, ₹3.22 ಲಕ್ಷ ಶೇರು ಬಂಡವಾಳದೊಂದಿಗೆ ಪ್ರಾರಂಭ ಮಾಡಿದರು. ₹61 ಸಾವಿರ ಠೇವು, ₹20 ಸಾವಿರ ಲಾಭವನ್ನು ಗಳಿಸುವ ಮೂಲಕ ಮೊದಲ ವರ್ಷದಲ್ಲಿಯೇ ಬೆಳೆಯುವ ಭರವಸೆ ಮೂಡಿಸಿತು.
23 ವಸಂತ ಪೂರೈಸಿರುವ ಸಂಸ್ಥೆಯು 2024-25ನೇ ಸಾಲಿನ ಮಾರ್ಚ್ ಕೊನೆಯಲ್ಲಿ 16,000 ಸದಸ್ಯರನ್ನು ಹೊಂದಿದ್ದು, ₹2.76 ಕೋಟಿ ನಿವ್ವಳ ಲಾಭ ಗಳಿಸಿದೆ. ಪ್ರಸ್ತುತ ₹23.50 ಲಕ್ಷ ಶೇರು ಬಂಡವಾಳ, ₹106.55 ಕೋಟಿ ದುಡಿಯುವ ಬಂಡವಾಳ, ₹13.35 ಕೋಟಿ ಗುಂತಾವಣಿಗಳು, ₹96.72 ಕೋಟಿ ಠೇವುಗಳನ್ನು ಹೊಂದಿದೆ. ವಿವಿಧ ಕ್ಷೇತ್ರಗಳ ಜನರಿಗೆ ಒಟ್ಟು ₹89.44 ಕೋಟಿ ಸಾಲ ನೀಡಿದೆ’ ಎಂದು ಈರಣ್ಣ ಕಡಾಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಸಕ್ತ ಸಾಲಿನಲ್ಲಿ ಶೇ 20ರಷ್ಟು ಲಾಭಾಂಶ ವಿತರಿಸಿದೆ. ವಾಹನ ಖರೀದಿ, ಕೃಷಿ, ಹೈನುಗಾರಿಕೆ ಅಭಿವೃದ್ಧಿ, ಗೃಹ ನಿರ್ಮಾಣ, ವ್ಯಾಪಾರ, ಗುಡಿ ಕೈಗಾರಿಕೆಗಳಿಗೆ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ಹೀಗೆ ಜನರ ಅವಶ್ಯಕತೆಗೆ ಅನುಗುಣವಾಗಿ ಸಾಲವನ್ನು ನೀಡಿದೆ.
ನೂತನ ಕಟ್ಟಡ: ಕಲ್ಲೋಳಿ ಪಟ್ಟಣದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿದೆ. ಆರ್ಟಿಜಿಎಸ್, ನೆಪ್ಟ್ ಮತ್ತು 100 ಯುನಿಟ್‌ಗಳ ಸೇಪ್ ಲಾಕರ್ ವ್ಯವಸ್ಥೆ ಮಾಡಿದೆ. ಮುಂದಿನ ದಿನಗಳಲ್ಲಿ ಸೊಸೈಟಿ ಕಟ್ಟಡದಲ್ಲಿ ಎಟಿಎಂ ಸೌಲಭ್ಯ ಕಲ್ಪಿಸುವುದಾಗಿ ಈರಣ್ಣ ಕಡಾಡಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಧಾರ್ಮಿಕ ಕಾರ್ಯಗಳಿಗೆ ಸಹಾಯ, ರೈತರಿಗೆ ತರಬೇತಿ, ಆರ್ಥಿಕ ನೆರವು ನೀಡುತ್ತಿದೆ. ಸಿದ್ಧೇಶ್ವರ ಸ್ವಾಮೀಜಿ ಹಸ್ತದಿಂದ ಉದ್ಘಾಟನೆಯಾಗಿದ್ದರ ದ್ಯೋತಕವಾಗಿ ಸಂಸ್ಥೆಯು ಸಮಾಜಮುಖಿಯಾಗಿ ಗುರುತಿಸಿಕೊಂಡಿದೆ.
ಮಹಿಳಾ ಸ್ವ ಸಹಾಯ ಸಂಘಗಳಿಗೆ ₹60.23 ಕೋಟಿ ಸಾಲ ನೀಡಿ ಸ್ವಾವಲಂಬನೆಗೆ ಮತ್ತು ಸ್ವದೇಸಿ ಚಿಂತನೆಯ ಸಾಕಾರಕ್ಕೆ ಮಹಾಲಕ್ಷ್ಮೀ ಸಂಸ್ಥೆ ಗಮನ ನೀಡಿದೆಈರಣ್ಣ ಕಡಾಡಿ ಸಂಸ್ಥಾಪಕ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.