ADVERTISEMENT

ಪೊಲೀಸರಿಗೆ ನಾಗರಿಕರ ಸಹಕಾರ ಅವಶ್ಯ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರಹುಸೇನ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 14:54 IST
Last Updated 6 ಏಪ್ರಿಲ್ 2022, 14:54 IST
ಮುಖ್ಯಮಂತ್ರಿ ಪದಕಕ್ಕೆ ಭಾಜನವಾದ ಬೆಳಗಾವಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸುರೇಶ ಯಾದವ ಹಾಗೂ ಸಂಕಲ್ಪ ಪ್ರತಿಷ್ಠಾನಗಳಿಂದ ಬುಧವಾರ ಸತ್ಕರಿಸಲಾಯಿತು
ಮುಖ್ಯಮಂತ್ರಿ ಪದಕಕ್ಕೆ ಭಾಜನವಾದ ಬೆಳಗಾವಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸುರೇಶ ಯಾದವ ಹಾಗೂ ಸಂಕಲ್ಪ ಪ್ರತಿಷ್ಠಾನಗಳಿಂದ ಬುಧವಾರ ಸತ್ಕರಿಸಲಾಯಿತು   

ಬೆಳಗಾವಿ: ‘ಸಮಾಜದಲ್ಲಿ ಶಾಂತಿ–ಸುವ್ಯವಸ್ಧೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಾಗರಿಕರ ಸಹಕಾರ ಅತ್ಯವಶ್ಯವಾಗಿದೆ’ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರಹುಸೇನ್ ಪಠಾಣ ಹೇಳಿದರು.

ಇಲ್ಲಿನ ಆಟೊನಗರದಲ್ಲಿ ಸುರೇಶ್ ಯಾದವ ಹಾಗೂ ಸಂಕಲ್ಪ ಪ್ರತಿಷ್ಠಾನಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, 2021ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಪದಕ ಪುರಸ್ಕೃತರನ್ನು ಸತ್ಕರಿಸಿ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ’ ಎಂದರು.

ADVERTISEMENT

‘ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ತಮ್ಮ ವೈಯಕ್ತಿಕ ಜೀವನಕ್ಕಿಂತ ಸಾರ್ವಜನಿಕರ ಜೀವನದ ಸುರಕ್ಷತೆಗಾಗಿ ದುಡಿಯುತ್ತಾರೆ. ಅಪಾಯಗಳನ್ನೂ ಲೆಕ್ಕಿಸದೆ ಕಾನೂನಿನ ರಕ್ಷಣೆ ಮಾಡುವಲ್ಲಿ ನಿರಂತರವಾಗಿ ತೊಡಗಿರುತ್ತಾರೆ. ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸರ್ಕಾರ ಪ್ರಶಸ್ತಿ ನೀಡಿದಾಗ ಉಳಿದ ಸಿಬ್ಬಂದಿಗೂ ಪ್ರೇರಣೆ ದೊರೆಯುತ್ತದೆ’ ಎಂದರು.

ಸುರೇಶ್ ಯಾದವ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಆಟೊನಗರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸುರೇಶ್ ಯಾದವ ಮಾತನಾಡಿ, ‘ಪೊಲೀಸ್ ಇಲಾಖೆಯ ಮೇಲಿನ ಭರವಸೆಯೇ ಸಾರ್ವಜನಿಕರ ನಿರುಮ್ಮಳ ಬದುಕಿನ ಮೂಲವಾಗಿದೆ. ಅಸಹಾಯಕರು ಹಾಗೂ ಅಶಕ್ತರ ಪಾಲಿಗಂತೂ ಪೊಲೀಸ್ ಸಿಬ್ಬಂದಿ ದೈವ ಸ್ವರೂಪಿಯೇ ಆಗಿದ್ದಾರೆ. ಇತ್ತೀಚೆಗೆ ಹಬ್ಬ–ಹರಿದಿನಗಳಲ್ಲೂ ಪೊಲೀಸ್ ಸಿಬ್ಬಂದಿಯ ನಿಯೋಜನೆ ಹೆಚ್ಚಾಗುತ್ತಿದೆ. ಹೀಗಾಗಿ ಅವರು ಕುಟುಂಬದೊಂದಿಗೆ ಹಬ್ಬ ಆಚರಿಸುವುದಕ್ಕೂ ಆಗುತ್ತಿಲ್ಲ. ಹೀಗಾಗಿ, ಅವರನ್ನು ಸಮಾಜ ಸಹೋದರಂತೆ ಕಾಣಬೇಕು’ ಎಂದು ಹೇಳಿದರು.

ಡಿಎಸ್ಪಿ ವೀರೇಶ ದೊಡ್ಡಮನಿ, ಪೊಲೀಸ್ ಅಧಿಕಾರಿ ಬಸನಗೌಡ ಪಾಟೀಲ ಮಾತನಾಡಿದರು.

ಮುಖ್ಯಮಂತ್ರಿ ಪದಕ ಪಡೆದ ಎಸಿಬಿ ಪೊಲೀಸ್ ಇನ್‌ಸ್ಪೆಕ್ಟರ್‌ ಅಡಿವೇಶ ಗುದಿಗೊಪ್ಪ, ಹಿರೇಬಾಗೇವಾಡಿ ಠಾಣೆ ಇನ್‌ಸ್ಪೆಕ್ಟರ್‌ ವಿಜಯಕುಮಾರ ಸಿನ್ನೂರ, ರಾಜ್ಯ ಗುಪ್ತ ದಳದ ರಾಜೇಂದ್ರ ಬಡೇಸಗೋಳ, ಬೆಳಗಾವಿ ತಾಂತ್ರಿಕ ಕೋಶದ ಮುಖ್ಯ ಕಾನ್‌ಸ್ಟೆಬಲ್‌ ದೀಪಕ ಮಾಳವಾದೆ ಹಾಗೂ ಕಾನ್‌ಸ್ಟೆಬಲ್‌ ಸಚಿನ ಪಾಟೀಲ ಅವರನ್ನು ಗೌರವಿಸಲಾಯಿತು.

ಗುರು ರೋಡ್‌ಲೈನ್ಸ್ ಸಂಸ್ಥಾಪಕ ಗುರುದೇವ ಪಾಟೀಲ, ಆಟೊನಗರ ಪ್ಲಾಸ್ಟಿಕ್ರಿ ಸಂಘದ ಅಧ್ಯಕ್ಷ ರಿಯಾಜ್ ಪಠಾಣ, ರಾಘವೇಂದ್ರ ಪಾಟೀಲ, ಸಲೀಮ್ ಮುಲ್ಲಾ, ಅನಿಲ ಕುಕಡೊಳ್ಕರ, ಅಶೋಕ ಧರಿಗೌಡರ, ವಿಲಾಸ ಕೆರೂರ, ಮಹಾದೇವ ಟೊಣ್ಣಿ, ಸುರೇಶ ನಾಯರಿ, ದೀಪಕ ಕಂಗ್ರಾಳಕರ, ಮಹಾಂತೇಶ ಹೊಂಗಲ, ಏಕನಾಥ ಅಗಸಿಮನಿ, ಸಂತೋಷ ಮೇರಾಕಾರ, ರವಿರಾಜ ಪಾಟೀಲ ಇದ್ದರು.

ಸಮತಾ ಶಾಲೆಯ ಅಧ್ಯಕ್ಷ ಶಂಕರ ಬಾಗೇವಾಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.