ADVERTISEMENT

ಮದನಬಾವಿ: ₹ 10 ಲಕ್ಷ ವೆಚ್ಚದಲ್ಲಿ ಸೌರವಿದ್ಯುತ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 13:49 IST
Last Updated 29 ಜನವರಿ 2022, 13:49 IST
ನೇಸರಗಿ ಸಮೀಪದ ಮದನಬಾವಿ ಗ್ರಾಮದಲ್ಲಿ ಯೋಗಶ್ರೀ ಹಿಂದೂ ಸೇವಾ ಪ್ರತಿಷ್ಠಾನದಿಂದ ಸೌರ ವಿದ್ಯುತ್‌ ಬೀದಿದೀಪ ಸೌಲಭ್ಯವನ್ನು ಶನಿವಾರ ಉದ್ಘಾಟಿಸಲಾಯಿತು
ನೇಸರಗಿ ಸಮೀಪದ ಮದನಬಾವಿ ಗ್ರಾಮದಲ್ಲಿ ಯೋಗಶ್ರೀ ಹಿಂದೂ ಸೇವಾ ಪ್ರತಿಷ್ಠಾನದಿಂದ ಸೌರ ವಿದ್ಯುತ್‌ ಬೀದಿದೀಪ ಸೌಲಭ್ಯವನ್ನು ಶನಿವಾರ ಉದ್ಘಾಟಿಸಲಾಯಿತು   

ನೇಸರಗಿ: ‘ಯುವಕರು ಪ್ರತಿ ದಿನ ಭಾರತ ಮಾತೆ ಪೂಜಿಸಬೇಕು. ಯೋಧರನ್ನು ಗೌರವಿಸಬೇಕು’ ಎಂದು ಬೆಂಗಳೂರಿನ ಯೋಗಶ್ರೀ ಹಿಂದೂ ಸೇವಾ ಪ್ರತಿಷ್ಠಾನದ ಮುಖ್ಯಸ್ಥೆ ಯೋಗಕ್ಕ ತಿಳಿಸಿದರು.

ಸಮೀಪದ ಮದನಬಾವಿ ಗ್ರಾಮದ ಚನ್ನವೃಷಭೇಂದ್ರ ದೇವಸ್ಥಾನದಲ್ಲಿ ಯೋಗಶ್ರೀ ಹಿಂದೂ ಸೇವಾ ಪ್ರತಿಷ್ಠಾನದಿಂದ ₹ 10 ಲಕ್ಷ ವೆಚ್ಚದಲ್ಲಿ ಸೌರವಿದ್ಯುತ್‌ ದೀಪಗಳ ವ್ಯವಸ್ಥೆಯನ್ನು ಶನಿವಾರ ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.

‘ನಮ್ಮ ಕಾರ್ಯಕರ್ತರು ಹಿಂದುತ್ವದ ಅಡಿಯಲ್ಲಿ ದೇಶದ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ’ ಎಂದರು.

ADVERTISEMENT

ಮುಖಂಡ ನಿಂಗನಗೌಡ ದೊಡ್ಡಗೌಡರ ಮಾತನಾಡಿ, ‘ಮದನಬಾವಿಯಲ್ಲಿ ಹಲವು ಯೋಧರು ಇದ್ದಾರೆ. ಕೃಷಿ ಪ್ರಧಾನವಾದರೂ ನೌಕರಸ್ಥರು ಹೆಚ್ಚಾಗಿದ್ದಾರೆ. ಇಲ್ಲಿನ 60 ಕಡೆಗಳಲ್ಲಿ ಸೌರವಿದ್ಯುತ್‌ ದೀಪಗಳನ್ನು ಹಾಕಿರುವುದು ಉತ್ತಮ ಕಾರ್ಯವಾಗಿದೆ’ ಎಂದು ತಿಳಿಸಿದರು.

ಪಿಎಸ್ಐ ವೈ.ಎಲ್. ಶೀಗಿಹಳ್ಳಿ ಮಾತನಾಡಿದರು.

ಚನ್ನವೃಷಭೇಂದ್ರ ದೇವಸ್ಥಾನದ ಶಿವದೇವಿ ತಾಯಿ ಸಾನ್ನಿಧ್ಯ ವಹಿಸಿದ್ದರು. ಯಲ್ಲನಗೌಡ ಕೊಳದೂರ, ಯಲ್ಲನಗೌಡ ದೊಡ್ಡಗೌಡರ, ಹೇಮಂತಕುಮಾರ, ಕಣ್ಣನ್ ಪ್ರಸಾದ, ಕಮಲಮ್ಮ ಕೃಷ್ಣ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಫ್‌. ಕೊಳದೂರ, ಬಾಬು ದೊಡ್ಡಗೌಡರ, ಬಾಬು ಮರಿಗೌಡರ, ಸೋಮಪ್ಪ ಬೀಡಿ, ಕಳಕಪ್ಪ ಗಡಾದ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.