ADVERTISEMENT

ಕೊರೊನಾ ಪರೀಕ್ಷೆ ಕೈಗೊಳ್ಳುವಂತೆ ಕೋರಿದ ಯೋಧ: ಕಿಮ್ಸ್‌ಗೆ ದಾಖಲು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 13:18 IST
Last Updated 27 ಮಾರ್ಚ್ 2020, 13:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ತನಗೆ ಕೊರೊನಾ ಸೋಂಕು ತಗುಲಿದ್ದು, ಪರೀಕ್ಷೆ ಮಾಡಬೇಕೆಂದು ವಿಡಿಯೊ ಕಾಲ್‌ ಮೂಲಕ ಕೋರಿಕೊಂಡಿದ್ದ ಜಿಲ್ಲೆಯ ಯೋಧನೊಬ್ಬನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.

ವಿಡಿಯೊ ಕಾಲ್‌ನಲ್ಲಿ ತನ್ನನ್ನು ತಾನು ಸೈನಿಕ ಎಂದು ಪರಿಚಯಿಸಿಕೊಳ್ಳುವ ಈ ವ್ಯಕ್ತಿಯು, ‘ನಾನು ಹೈದರಾಬಾದ್‌ನಿಂದ ಬಂದಿದ್ದೇನೆ. ವಿಪರೀತ ಜ್ವರ ಹಾಗೂ ಉಸಿರಾಟದ ತೊಂದರೆ ಇದೆ. ಅದಕ್ಕಾಗಿ ಮಾರ್ಚ್‌ 17ರಿಂದ 24ರವರೆಗೆ ಮಾತ್ರೆ ತೆಗೆದುಕೊಂಡಿದ್ದೇನೆ. ಆದರೂ ಕಡಿಮೆಯಾಗಿಲ್ಲ. ಈ ಗುಣಲಕ್ಷಣಗಳನ್ನು ನೋಡಿದರೆ ನನಗೆ ಕೊರೊನಾ ಸೋಂಕು ತಗುಲಿದೆ’ ಎಂದು ಹೇಳಿಕೊಂಡಿದ್ದಾರೆ.

‘ನನ್ನ ಗುಣಲಕ್ಷಣಗಳು ಈಗ ತಾಯಿಯಲ್ಲೂ ಕಂಡುಬರುತ್ತಿವೆ. ಅವರಿಗೆ 65 ವರ್ಷ ವಯಸ್ಸಾಗಿದ್ದು, ಭಯವಾಗಿದೆ. ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯವರು ನಮ್ಮನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಿಲ್ಲ. ಕೇವಲ ವಿದೇಶಗಳಿಂದ ಬಂದವರಿಗೆ ಮಾತ್ರ ಪರೀಕ್ಷೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರೇ ನಮ್ಮನ್ನು ಪರೀಕ್ಷೆ ಮಾಡುವಂತೆ ವೈದ್ಯರಿಗೆ ಸೂಚಿಸಿ’ ಎಂದು ಕೋರಿಕೊಂಡಿದ್ದರು.

ADVERTISEMENT

ಪತ್ತೆ ಹಚ್ಚಿದ ಜಿಲ್ಲಾಡಳಿತ:ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಸಕ್ರಿಯವಾದ ಜಿಲ್ಲಾಡಳಿತವು, ಯೋಧನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು. ಬೆಳಗಾವಿಯಲ್ಲಿ ಅವರನ್ನು ಪತ್ತೆ ಹಚ್ಚಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದೆ.

‘ಯೋಧನ ವಿಡಿಯೊ ನಮ್ಮ ಗಮನಕ್ಕೂ ಬಂದಿತು. ಅವರಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಬಂದಿಲ್ಲ. ಅವರ ಸಮಾಧಾನಗೋಸ್ಕರ ಕಿಮ್ಸ್‌ಗೆ ದಾಖಲಿಸಿದ್ದೇವೆ. ಅವರು ಹೈದರಾಬಾದ್‌ನಿಂದ ಬಂದು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ಕಳೆದಿದೆ. ಅವರಿಗೇನಾದರೂ ಸೋಂಕು ತಗುಲಿದ್ದರೆ ಇಷ್ಟೊತ್ತಿಗೆ ಲಕ್ಷಣಗಳು ಕಂಡುಬರುತ್ತಿದ್ದವು. ಅವರಿಗೆ ಅಸ್ತಮಾ ಇದೆ. ಇದನ್ನೇ ಅವರು ಕೊರೊನಾ ಎಂದುಕೊಂಡು ಗೊಂದಲಕ್ಕೀಡಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.