ADVERTISEMENT

ವೀರಶೈವ ಲಿಂಗಾಯತ ಸಮಾಜದ ಮೂಲ ಕೆಲವರಿಗೆ ಗೊತ್ತಿಲ್ಲ: ರಂಭಾಪುರಿ ಶ್ರೀ

ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 1:58 IST
Last Updated 2 ಜನವರಿ 2026, 1:58 IST
ಹುಕ್ಕೇರಿ ಪಟ್ಟಣದಲ್ಲಿ ಗುರುವಾರ ಜರುಗಿದ ಹುಕ್ಕೇರಿ ಹಿರೇಮಠಷ್ಯ ‘ಗುರುಕುಲ ವಿದ್ಯಾರ್ಥಿ ಪರಿಷತ್ತಿನ 5ನೇ ವಾರ್ಷಿಕೋತ್ಸವ’ವನ್ನು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು
ಹುಕ್ಕೇರಿ ಪಟ್ಟಣದಲ್ಲಿ ಗುರುವಾರ ಜರುಗಿದ ಹುಕ್ಕೇರಿ ಹಿರೇಮಠಷ್ಯ ‘ಗುರುಕುಲ ವಿದ್ಯಾರ್ಥಿ ಪರಿಷತ್ತಿನ 5ನೇ ವಾರ್ಷಿಕೋತ್ಸವ’ವನ್ನು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು   

ಹುಕ್ಕೇರಿ: ವೀರಶೈವ ಲಿಂಗಾಯತ ಸಮಾಜದ ಮೂಲ ಮತ್ತು ಸೈದ್ಧಾಂತಿಕ ನೆಲೆಗಟ್ಟು ಕೆಲವರಿಗೆ ಗೊತ್ತಿಲ್ಲ. 12ನೇ ಶತಮಾನದ ಪೂರ್ವದಲ್ಲಿ ಸಿದ್ಧಾಂತ ಶಿಖಾಮಣಿ ಇತ್ತು. ಅದನ್ನು ಅರಿತು ಬಸವಾದಿ ಶರಣರು ಧರ್ಮ ಸ್ವೀಕಾರ ಮಾಡಿ, ಎಲ್ಲ ಜನರನ್ನು ಸನ್ಮಾರ್ಗಕ್ಕೆ ತರುವ ಪ್ರಯತ್ನ ಮಾಡಿದ್ದರು ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

ಪಟ್ಟಣದ ರೀಡ್ಸ್ ಸಂಸ್ಥೆಯ ಸ್ವಾಮಿ ವೀವೇಕಾನಂದ ಸಭಾ ಭವನದಲ್ಲಿ ಹುಕ್ಕೇರಿ ಹಿರೇಮಠ ‘ಗುರುಕುಲ ವಿದ್ಯಾರ್ಥಿ ಪರಿಷತ್ತಿನ 5ನೇ ವಾರ್ಷಿಕೋತ್ಸವ’ ಉದ್ಘಾಟಿಸಿ ಗುರುವಾರ ಮಾತನಾಡಿದರು.

ವೀರಶೈವ ಲಿಂಗಾಯತ ಧರ್ಮಕ್ಕೆ ಹೊರಗಿನವರಿಗಿಂತ, ಒಳಗಿನವರಿಂದಲೆ ಅಪಾಯವಾಗುತ್ತಿದೆ. 1904ರಲ್ಲಿ ಹಾನಗಲ್ ಕುಮಾರ ಸ್ವಾಮೀಜಿ ಅವರ ದೂರದೃಷ್ಟಿಯಿಂದ ‘ಅಖಿಲ ಭಾರತ ವೀರಶೈವ ಲಿಂಗಾಯತ ಧರ್ಮ’ ಸ್ಥಾಪನೆಯಾದದ್ದನ್ನು ಸ್ಮರಿಸಿದ ಶ್ರೀಗಳು, ಬಸವಾದಿ ಶರಣರು ಮರದ ರೆಂಬೆ ಕೊಂಬೆಯಾಗಿ, ಹೂವು ಹಣ್ಣುಗಳಾಗಿ ವೀರಶೈವ ಲಿಂಗಾಯತ ಧರ್ಮದ ಬೆಳವಣಿಗೆಗೆ ಶ್ರಮಿಸಿದ್ದಕ್ಕೆ ಈ ಧರ್ಮ ಇಷ್ಟೊಂದು ಆಳವಾಗಿ ಬೇರೂರಿ ಅಸ್ತಿತ್ವದಲ್ಲಿದೆ ಎಂದು ಮಾರ್ಮಿಕವಾಗಿ ಹೇಳಿದರು.

ADVERTISEMENT

ಈ ಧರ್ಮದಲ್ಲಿ ಇತರೆ ಧರ್ಮದಲ್ಲಿರುವ ಅಂಹಿಸೆ, ಸಮತೆ, ಕರುಣೆ, ನಿಷ್ಠೆ, ಜ್ಞಾನ, ಭಕ್ತಿ ಎಲ್ಲವೂ ಒಳಗೊಂಡಿದೆ. ಹಾಗಾಗಿ ವೀರ ಗಂಗಾಧರ ಜಗದ್ಗುರು ಹೇಳಿದಂತೆ ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೆ ವಿಶ್ವಕ್ಕೆ ಶಾಂತಿ’ ಎಂಬುದು ಸದ್ಯ ಪ್ರಸ್ತುತವಾಗುತ್ತಿದೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಮಾತನಾಡಿ, ಗುರು–ವಿರಕ್ತರು ದೇಹದ ಎರಡು ಕಣ್ಣಿದ್ದಂತೆ. ಇರ್ವರು ಒಂದಾಗಿ ಕೆಲಸ ಮಾಡಿಕೊಂಡು ಭಕ್ತರಿಗೆ ಮಾರ್ಗದರ್ಶನ ಮಾಡುವಂತೆ ವಿನಂತಿಸಿದರು. ಹಿಂದೂಗಳಿಗೆ ಜಗತ್ತಿನಲ್ಲಿ ಭಾರತ ಒಂದೇ ರಾಷ್ಟ್ರ. ಹಿಂದೂಗಳು ಉಳಿಯಬೇಕಾದಲ್ಲಿ ಸನಾತನ ಧರ್ಮದ ತತ್ವ ಪಾಲಿಸುವಂತೆ ಜನರಿಗೆ ಸಲಹೆ ನೀಡಿದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಶಾಸಕ ಧುರ್ಯೋಧನ ಐಹೊಳೆ ಮಾತನಾಡಿ, ಹಿರೇಮಠದ ಚಂದ್ರಶೇಖರ್ ಸ್ವಾಮೀಜಿಯವರ ಧಾರ್ಮಿಕ, ಶೈಕ್ಷಣಿಕ, ಮಹಿಳೆಯರಿಗೆ ನೀಡುವ ಆದ್ಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಟಕೋಳ ಎಂ.ಚಂದರಗಿ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಹಿರೇಮಠದ ಚಂದ್ರಶೇಖರ್ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಕಬ್ಬೂರ ಮಠದ ಗೌರಿಶಂಕರ ಸ್ವಾಮೀಜಿ, ಪಾಶ್ಚಾಪುರ ವಿಶ್ವರಾಧ್ಯ ಸ್ವಾಮೀಜಿ, ಕೊಣ್ಣೂರ ಮರಡಿ ಮಠದ ಡಾ.ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಸತ್ಕಾರ: ಇದೇ ಸಂದರ್ಭದಲ್ಲಿ ಶ್ರೀಗಳನ್ನು, ಗಣ್ಯರನ್ನು, ಪರಿಷತ್ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ನಿಶಾಂತ ಸ್ವಾಮೀಜಿ ಮತ್ತು ಮಲ್ಲಯ್ಯ ಗುಡಿ ಅನಿಸಿಕೆ ವ್ಯಕ್ತಪಡಿಸಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ನಿರ್ದೇಶಕ ಮಲ್ಲಣ್ಣ ಯಾದವಾಡ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜೀತ ಮುನ್ನೋಳಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ್ ಬ್ಯಾಳಿ, ರೀಡ್ಸ್ ಸಂಸ್ಥೆಯ ಅಧ್ಯಕ್ಷ ಅಶೋಕ ಪಾಟೀಲ್, ಮುಖಂಡರಾದ ಮಹೇಶ್ ಭಾತೆ, ಬೈಲಹೊಂಗಲದ ಡಾ.ಮಹಾಂತೇಶ ಶಾಸ್ತ್ರಿ, ಮಹಾವೀರ ಬಾಗಿ, ತಿಪ್ಪೆಸ್ವಾಮಿ, ಚನ್ನಪ್ಪ ಗಜಬರ, ಸುರೇಶ ಜಿನರಾಳ, ಎಚ್.ಎಲ್.ಪೂಜೇರಿ, ಪ್ರಶಾಂತ ರವದಿ, ಶ್ರೀಶೈಲ್ ಮಠಪತಿ, ರಾಜೇಶ್ ಬೀಳಗಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

ಚಂದ್ರಶೇಖರ್ ಸ್ವಾಮೀಜಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಗುರುಕುಲ ಮುಖ್ಯಸ್ಥ ಸಂಪತ್ ಕುಮಾರ ಶಾಸ್ತ್ರೀಜಿ ಮತ್ತು ನಿಶಾಂತ ಸ್ವಾಮೀಜಿ ನಿರೂಪಿಸಿದರು. ಮುಖ್ಯ ಶಿಕ್ಷಕ ಶಿವಾನಂದ ಜಿನರಾಳಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.