ADVERTISEMENT

ಸೋಮೇಶ್ವರ ಕಾರ್ಖಾನೆ ಪ್ರಗತಿಗೆ ಸಹಕಾರ ಅಗತ್ಯ: ಬಸವರಾಜ ಬಾಳೇಕುಂದರಗಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 1:42 IST
Last Updated 25 ಸೆಪ್ಟೆಂಬರ್ 2025, 1:42 IST
ಬೈಲಹೊಂಗಲ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಉದ್ಘಾಟಿಸಿದರು
ಬೈಲಹೊಂಗಲ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಉದ್ಘಾಟಿಸಿದರು   

ಬೈಲಹೊಂಗಲ: ಶ್ರೀ ಸೋಮೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಕಳೆದ ಸಾಲಿನಲ್ಲಿ ಶೇ 12.53 ಸರಾಸರಿ ಕಬ್ಬು ಇಳುವರಿಯೊಂದಿಗೆ 2.53 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದನೆ ಮಾಡಲಾಗಿದೆ. ರಾಜ್ಯದಲ್ಲಿ ಅತ್ಯುತ್ತಮ ಸಕ್ಕರೆ ಇಳುವರಿಗಾಗಿ ಸಿಸ್ಟಾದಿಂದ ಪ್ರಥಮ ಸ್ಥಾನ ಪ್ರಶಸ್ತಿ ಪಡೆದಿದೆ ಎಂದು ಶ್ರೀ ಸೋಮೇಶ್ವರ ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಹೇಳಿದರು.

ಇಲ್ಲಿಯ ಕಾರ್ಖಾನೆ ನಿವೇಶನದಲ್ಲಿ ಬುಧವಾರ ನಡೆದ 2024-25ನೇ ಸಾಲಿನ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಹಕಾರಿ ರಂಗದ ಕಾರ್ಖಾನೆ ನಡೆಸುವುದು ತುಂಬಾ ಕಷ್ಟದ್ದಾಗಿದೆ. ವೈಯಕ್ತಿಕ ಬಾಂಡ್-ಚೆಕ್‌ಗಳನ್ನು ನೀಡಿ, ಸಾಲ ಮಂಜೂರಿಸುವ ಜವಾಬ್ದಾರಿ ಇದೆ. ಪ್ರಸ್ತುತ ಕಾರ್ಖಾನೆ ಕಬ್ಬು ನುರಿಯುವ ಸಾಮರ್ಥ್ಯವನ್ನು 2500 ಟಿಸಿಡಿಯಿಂದ 4500 ಟಿಸಿಡಿಗೆ ಹೆಚ್ಚಿಸುವುದು, 100 ಕೆಎಲ್ಪಿಡಿ ಇಥೆನಾಲ್ ಘಟಕ ಮತ್ತು 12 ಮೆ.ವ್ಯಾಟ ವಿದ್ಯುತ್ ಉತ್ಪಾದನೆ ಮಾಡಿದರೆ ಮಾತ್ರ ಸಹಕಾರಿ ರಂಗದ ಈ ಕಾರ್ಖಾನೆ ಉಳಿದು ಬೆಳೆಯಲು ಸಾಧ್ಯವಾಗುತ್ತದೆ. ಹೀಗಾಗಿ ₹ 47 ಕೋಟಿ ಸಾಲ ಪಡೆದು ಕಾರ್ಖಾನೆ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮಿಸುತ್ತಿದೆ’ ಎಂದರು.

ADVERTISEMENT

ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ನಿರ್ದೇಶಕ ಮಹಾಂತೇಶ ಮತ್ತಿಕೊಪ್ಪ ಮಾತನಾಡಿ, ಕಾರ್ಖಾನೆ ಆಗು-ಹೋಗುಗಳ ಕುರಿತು ಮಾಹಿತಿ ನೀಡಿದರು.

ಸಹಕಾರ ಸಂಘಗಳ ಜಂಟಿ ನಿಬಂಧಕ ಹಾಗೂ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ ಮಾತನಾಡಿ, ‘ಕಾರ್ಖಾನೆ ಅಧಿಕಾರ ವಹಿಸಿಕೊಂಡು ಕೆಲವೇ ದಿನಗಳಾಗಿವೆ. ಸಾಧ್ಯವಾದಷ್ಟು ಪ್ರಗತಿ ಸಾಧಿಸಲಾಗುವುದು. ರೈತರು, ಕಬ್ಬು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಬೇಕು. ಕಾರ್ಖಾನೆ ಉಳಿಸಿ, ಬೆಳೆಸಬೇಕು’ ಎಂದರು.

ನಿರ್ದೇಶಕರಾದ ಉಮೇಶ ಬಾಳಿ, ರಾಚಪ್ಪ ಮಟ್ಟಿ, ಪ್ರಕಾಶ ಬಾಳೇಕುಂದರಗಿ, ಕಾರ್ತಿಕ ಮಲ್ಲೂರ, ಅಶೋಕ ಯರಗೊಪ್ಪ, ಮಲ್ಲಪ್ಪ ಅಷ್ಠಗಿ, ಅನಿತಾ ಮೆಟಗುಡ್ಡ, ಕಸ್ತೂರಿ ಸೋಮನಟ್ಟಿ, ಅದೃಶ್ಯಪ್ಪ ಕೋಟಬಾಗಿ, ಅಶೋಕ ಬಾಳೇಕುಂದರಗಿ, ರಾಮಚಂದ್ರ ಕಕ್ಕಯ್ಯನವರ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ, ಶ್ರೀಶೈಲ ಶರಣಪ್ಪನವರ ಇದ್ದರು.

ಕಳವಳ

ಕಾರ್ಖಾನೆ ಪ್ರಗತಿ ಮತ್ತು ನ್ಯೂನ್ಯತೆಗಳ ಕುರಿತು ಮಾತಿನ ಚಕಮಕಿಗಳು ನಡೆದವು. ನಿರ್ದೇಶಕ ರಾಚಪ್ಪ ಮಟ್ಟಿ ರೈತ ಮುಖಂಡರಾದ ಮಲ್ಲಿಕಾರ್ಜುನ ಹುಂಬಿ ಮಹಾಂತೇಶ ಕಮತ ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಕೋಲಕಾರ ಸೇರಿದಂತೆ ಅನೇಕ ರೈತ ಮುಖಂಡರು ಕೆಲ ವಿಚಾರಗಳ ಕುರಿತು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.