ADVERTISEMENT

‘ವಿಶೇಷ’ ಮಕ್ಕಳಿಗೆ ಪ್ರತ್ಯೇಕ ಉದ್ಯಾನ

ಬಸವೇಶ್ವರ ವೃತ್ತ ಬಳಿಯ ಮಹಾತ್ಮ ಫುಲೆ ಉದ್ಯಾನದಲ್ಲಿ ಅಭಿವೃದ್ಧಿ

ಎಂ.ಮಹೇಶ
Published 12 ಆಗಸ್ಟ್ 2021, 11:34 IST
Last Updated 12 ಆಗಸ್ಟ್ 2021, 11:34 IST
ಬೆಳಗಾವಿಯ ಬಸವೇಶ್ವರ ವೃತ್ತದ ಬಳಿಯ ಮಹಾತ್ಮ ಫುಲೆ ಉದ್ಯಾನದಲ್ಲಿ ವಿಶೇಷ ಮಕ್ಕಳಿಗಾಗಿ ನಿರ್ಮಿಸಿರುವ ಉದ್ಯಾನದಲ್ಲಿನ ‘ಫನ್‌ ಜಿಮ್‌’ನ ನೋಟಪ್ರಜಾವಾಣಿ ಚಿತ್ರ
ಬೆಳಗಾವಿಯ ಬಸವೇಶ್ವರ ವೃತ್ತದ ಬಳಿಯ ಮಹಾತ್ಮ ಫುಲೆ ಉದ್ಯಾನದಲ್ಲಿ ವಿಶೇಷ ಮಕ್ಕಳಿಗಾಗಿ ನಿರ್ಮಿಸಿರುವ ಉದ್ಯಾನದಲ್ಲಿನ ‘ಫನ್‌ ಜಿಮ್‌’ನ ನೋಟಪ್ರಜಾವಾಣಿ ಚಿತ್ರ   

ಬೆಳಗಾವಿ: ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸವೇಶ್ವರ ವೃತ್ತದ ಬಳಿಯ ಮಹಾತ್ಮ ಫುಲೆ ಉದ್ಯಾನದಲ್ಲಿ ವಿಶೇಷ ಮಕ್ಕಳು ಮತ್ತು ಅವರ ಪೋಷಕರಿಗಾಗಿಯೇ ಪ್ರತ್ಯೇಕ ಉದ್ಯಾನ ಅಭಿವೃದ್ಧಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ.

ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಮತ್ತು ಅವರ ಪರಿಕಲ್ಪನೆಯಂತೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ಉದ್ಯಾನ ಮೈದಳೆದಿದೆ. ಗೋವಾ ಮತ್ತು ಪುಣೆಯಲ್ಲಿನ ಮಾದರಿಯನ್ನು ಆಧರಿಸಿ ಇಲ್ಲಿ ಉದ್ಯಾನ ರೂಪಿಸಲಾಗಿದೆ. ಇದಕ್ಕಾಗಿ ಅಧಿಕಾರಿಗಳು ಹಾಗೂ ಶಾಸಕರು ಅಧ್ಯಯನ ಪ್ರವಾಸವನ್ನೂ ಕೈಗೊಂಡಿದ್ದರು.

ಮಕ್ಕಳು ಆಡುತ್ತಾ ನಲಿಯುತ್ತಾ ಕಲಿಯುವುದಕ್ಕೆ ಅಥವಾ ಖುಷಿಪಡುವುದಕ್ಕೆ ಅವಕಾಶ ಮಾಡಿಕೊಡುವ ಪ್ರಯತ್ನವನ್ನು ಈ ಉದ್ಯಾನದಲ್ಲಿ ಮಾಡಲಾಗಿದೆ. ಅದಕ್ಕಾಗಿ ಫನ್ ಜಿಮ್, ಕಲರ್ ಟಬ್, ವಾಕರ್, ನಾಲ್ಕು ಬಗೆಯ ಸ್ವಿಂಗ್ಸ್, ಬಯಲು ರಂಗಮಂದಿರ, ಬಾಲ್ ರೂಂ ನಿರ್ಮಾಣ ಹಂತದಲ್ಲಿದೆ. ಆ ಪೋಷಕರಲ್ಲಿ ಇರಬಹುದಾದ ಕೀಳರಿಮೆ ಅಥವಾ ನೋವನ್ನು ಕೆಲ ಹೊತ್ತಾದರೂ ಮರೆಸಬೇಕು ಎನ್ನುವುದು ಈ ಉಪಕ್ರಮದ ಉದ್ದೇಶವಾಗಿದೆ.

ADVERTISEMENT

ನೋವು ಮರೆಯಲೆಂದು:

‘ವಿಶೇಷ ಮಕ್ಕಳು ಹಾಗೂ ಅವರ ಪೋಷಕರಿಗೆ ಮಾತ್ರವೇ ಇಲ್ಲಿಗೆ ಪ್ರವೇಶ ನೀಡಲಾಗುತ್ತದೆ. ಅವರಿಗೆ ಕಾರ್ಡ್‌ ಕೊಡುವುದಕ್ಕೆ ಯೋಜಿಸಿದ್ದೇವೆ. ಸಾಮಾನ್ಯ ಜನರು ಬಂದಾಗ, ವಿಶೇಷ ಮಕ್ಕಳನ್ನು ನೋಡಿ ನಗುವುದು ಅಥವಾ ಹೀಯಾಳಿಸುವುದು ಮಾಡಿದರೆ ಪೋಷಕರಿಗೆ ಬೇಸರವಾಗುತ್ತದೆ. ಬೇಸರ ಕಳೆಯಲೆಂದು ಉದ್ಯಾನಕ್ಕೆ ಬರುವವರು ನೋವು ಪಟ್ಟುಕೊಂಡು ಹೋಗಬಾರದು. ಹೀಗಾಗಿ, ಅವರಿಗಷ್ಟೆ ಪ್ರವೇಶ ಕೊಡಲಾಗುವುದು. ಆಗ, ಅವರು ಹಿಂಜರಿಕೆ ಇಲ್ಲದೆ ಮಕ್ಕಳೊಂದಿಗೆ ಸಮಯ ಕಳೆಯಬಹುದಾಗಿದೆ’ ಎನ್ನುತ್ತಾರೆ ಶಾಸಕ ಅಭಯ ಪಾಟೀಲ.

‘ತಜ್ಞರು ಮತ್ತು ಮಕ್ಕಳ ವೈದ್ಯರ ಸಲಹೆಯ ಮೇರೆಗೆ ಉದ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಅವರಿಗೆ ಎಂತಹ ಚಟುವಟಿಕೆಗಳು ಇಷ್ಟವಾಗಬಲ್ಲವೋ ಅವುಗಳಿಗೆ ಅವಕಾಶವಿದೆ. ಅದಕ್ಕೆ ಪೂರಕವಾಗಿ ಸಾಧನ ಮತ್ತು ಉಪಕರಣಗಳನ್ನು ಅಳವಡಿಸಲಾಗಿದೆ. ವಿಶೇಷ ಮಕ್ಕಳಿಗೆಂದೇ ವಿಶೇಷ ಮತ್ತು ಪ್ರತ್ಯೇಕವಾಗಿ ರೂಪಿಸಿರುವ ರಾಜ್ಯದ ಮೊದಲ ಉದ್ಯಾನ ಇದಾಗಿದೆ’ ಎಂದು ತಿಳಿಸಿದರು.

‘ಫನ್ ಜಿಮ್‌ನಲ್ಲಿ ಮಕ್ಕಳು ಹತ್ತಬಹುದು, ಇಳಿಯಬಹುದು ಮತ್ತು ಜಾರಬಹುದು. ಅಕಸ್ಮಾತ್ ಬಿದ್ದರೂ ಪೆಟ್ಟಾಗದಿರಲೆಂದು ಬಹಳ ಮೃದುವಾದ ಫ್ಲೋರಿಂಗ್ ಮಾಡಲಾಗಿದೆ. ಉದ್ಯಾನವು ಫಿಜಿಯೊಥೆರಫಿ ಮಾದರಿಯಲ್ಲಿ ಕಾರ್ಯನಿರ್ವಹಿಸಲಿವೆ ಎನ್ನುವುದು ನಮ್ಮ ಆಶಾಭಾವ. ಪೋಷಕರಿಗೂ ಹಲವು ಚಟುವಟಿಕೆಗಳು ಇಲ್ಲಿರುತ್ತವೆ. ಈ ಭಾಗದವರಿಗೆ ಇದರಿಂದ ಅನುಕೂಲವಾಗುತ್ತದೆ’ ಎಂದು ಸ್ಮಾರ್ಟ್ ಸಿಟಿ ಇಂಜಿನಿಯರ್ ಅಜಿತ ಪಾಟೀಲ ಹೇಳಿದರು.

ಹಿಂಜರಿಕೆ ಹೋಗಲಾಡಿಸಲು

ವಿಶೇಷ ಮಕ್ಕಳನ್ನು ಸಾಮಾನ್ಯ ಉದ್ಯಾನಗಳಿಗೆ ಕರೆದುಕೊಂಡು ಹೋಗುವುದಕ್ಕೆ ಕೆಲವು ಪೋಷಕರು ಹಿಂಜರಿಯುತ್ತಾರೆ. ಅವರ ಕೀಳರಿಮೆ ಹೋಗಲಾಡಿಸಲು ಪ್ರತ್ಯೇಕವಾಗಿಯೇ ಉದ್ಯಾನ ರೂಪಿಸಲಾಗಿದೆ.

–ಅಭಯ ಪಾಟೀಲ, ಶಾಸಕ, ದಕ್ಷಿಣ ಮತ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.