
ರಾಯಬಾಗ: ತಾಲ್ಲೂಕಿನಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಪಶು ಚಿಕಿತ್ಸಾ ಕೇಂದ್ರಗಳ ಸಂಖ್ಯೆ ಕಡಿಮೆ ಇದೆ. ಅದರಲ್ಲೂ ಕಂಕಣವಾಡಿ, ಚಿಂಚಲಿ ಮತ್ತು ಮೇಖಳಿ ಗ್ರಾಮಗಳಲ್ಲಿ ಇರುವ ಪಶು ಚಿಕಿತ್ಸಾ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸುವ ಅಗತ್ಯವಿದೆ.
ಕಂಕಣವಾಡಿ ಪಟ್ಟಣದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರವು ದೇವಾಪುರಹಟ್ಟಿ ಮತ್ತು ನಿಪನಾಳ ಗ್ರಾಮಗಳನ್ನೂ ಒಳಗೊಂಡಿದೆ. ಇಲ್ಲಿ ದನ 6,377, ಎಮ್ಮೆ 9,833 ಸೇರಿ ಒಟ್ಟು 16,210 ದೊಡ್ಡ ಜಾನುವಾರುಗಳಿವೆ. ಇದರ ಜೊತೆಗೆ 5,000 ಕುರಿ, 10,182 ಆಡುಗಳು, 47,240 ಕೋಳಿಗಳು, 855 ನಾಯಿಗಳು ಹಾಗೂ 61 ಕುದುರೆಗಳಿವೆ. ಇಷ್ಟೊಂದು ದೊಡ್ಡ ಪ್ರಮಾಣದ ಜಾನುವಾರುಗಳಿಗೆ ಒಂದೇ ಪ್ರಾಥಮಿಕ ಮಟ್ಟದ ಚಿಕಿತ್ಸಾ ವ್ಯವಸ್ಥೆ ಸಾಕೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ಚಿಂಚಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ವ್ಯಾಪ್ತಿಯಲ್ಲಿ ದನ 4,233, ಎಮ್ಮೆ 7,375 ಸೇರಿ ಒಟ್ಟು 11,608 ದೊಡ್ಡ ಜಾನುವಾರುಗಳಿದ್ದು, ಕುರಿ–ಆಡುಗಳ ಸಂಖ್ಯೆ 6,265ಕ್ಕೆ ತಲುಪಿದೆ. ಅತಿ ಗಮನಾರ್ಹ ಅಂಶವೆಂದರೆ; ಇಲ್ಲಿ ಕೋಳಿಗಳ ಸಂಖ್ಯೆ 1.94 ಲಕ್ಷ! ಇಷ್ಟೊಂದು ಕೋಳಿ ಉದ್ಯಮ ನಡೆಯುತ್ತಿರುವ ಪ್ರದೇಶದಲ್ಲಿ ಸುಸಜ್ಜಿತ ಪಶು ವೈದ್ಯಕೀಯ ಸೇವೆಗಳ ಕೊರತೆ ರೈತರಿಗೆ ದೊಡ್ಡ ಹೊಡೆತ ನೀಡುತ್ತಿದೆ.
ಮೇಖಳಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಂತೂ ದನ–ಎಮ್ಮೆ 9,734 ಇದ್ದರೆ, ಕುರಿ–ಆಡುಗಳ ಸಂಖ್ಯೆ 20,865ಕ್ಕೆ ಏರಿದೆ. ಜೊತೆಗೆ 51,907 ಕೋಳಿಗಳು, 1,589 ನಾಯಿಗಳು ಹಾಗೂ 40 ಕುದುರೆಗಳಿವೆ.
ಈ ಅಂಕಿ– ಅಂಶಗಳು ಕೇವಲ ಸಂಖ್ಯೆಗಳಲ್ಲ; ಅವು ಗ್ರಾಮೀಣ ಕುಟುಂಬಗಳ ಬದುಕು, ಆದಾಯ ಮತ್ತು ಭವಿಷ್ಯದ ಪ್ರತಿಬಿಂಬಗಳಾಗಿವೆ. ಇಷ್ಟೊಂದು ಜಾನುವಾರುಗಳಿರುವ ಪ್ರದೇಶಗಳಲ್ಲಿ ಇನ್ನೂ ಪ್ರಾಥಮಿಕ ಮಟ್ಟದ ಪಶು ಚಿಕಿತ್ಸಾ ಕೇಂದ್ರಗಳನ್ನೇ ಮುಂದುವರೆಸುತ್ತಿರುವುದು ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ಲಕ್ಷ್ಯ ಎಂಬುದು ಪಟ್ಟಣ ಪಂಚಾಯಿತಿ ಸದಸ್ಯ ರಾಜಶೇಖರ ಖಣದಾಳೆ ಅವರ ದೂರು.
ಜಾನುವಾರು ಗಣತಿ ಅಂಕಿ–ಅಂಶಗಳನ್ನೇ ಇಲಾಖೆ ತನ್ನ ಯೋಜನೆಗಳ ಆಧಾರವೆಂದು ಹೇಳಿಕೊಳ್ಳುತ್ತಿರುವಾಗ, ಇಂತಹ ಸ್ಪಷ್ಟ ಅಂಕಿ–ಅಂಶಗಳಿದ್ದರೂ ಮೇಲ್ದರ್ಜೆಗೆ ಉನ್ನತಿಗೇರಿಸುವ ಪ್ರಕ್ರಿಯೆಗೆ ಹಿಂದೇಟು ಹಾಕುತ್ತಿರುವುದು ಅರ್ಥವಾಗದ ಸಂಗತಿ ಎನ್ನುತ್ತಾರೆ ಚಿಂಚಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕವಿತಾ ಯಡ್ರಾಂವೆ.
ಈಗಾದರೂ ಇಲಾಖೆ ಎಚ್ಚೆತ್ತುಕೊಂಡು, ಕಂಕನವಾಡಿ, ಚಿಂಚಲಿ ಮತ್ತು ಮೇಖಳಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಅಗತ್ಯವಿದ್ದ ಹಳ್ಳಿಗಳಲ್ಲಿ ಹೆಚ್ಚುವರಿ ಕೇಂದ್ರಗಳನ್ನು ತೆರೆಯಬೇಕು ಎಂಬುದು ರೈತರ ಆಗ್ರಹ.
ಜಾನುವಾರುಗಳ ಸಂಖ್ಯೆ ಅನುಸಾರ ಆರೈಕೆ ವ್ಯವಸ್ಥೆ ಕಲ್ಪಿಸುವುದು ಆಡಳಿತದ ಹೊಣೆಗಾರಿಕೆ. ಇದರಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ. ಸದನದಲ್ಲಿ ಧ್ವನಿ ಎತ್ತುತ್ತೇನೆಡಿ.ಎಂ. ಐಹೊಳೆ ಶಾಸಕ ರಾಯಬಾಗ
ಈ ಭಾಗದಲ್ಲಿ ಹೈನುಗಾರಿಕೆ ಕೋಳಿ ಸಾಕಣೆಯಂಥ ಕೆಲಸಗಳ ಮೇಲೆ ಹೆಚ್ಚು ರೈತರು ಅವಲಂಬನೆಯಾಗಿದ್ದಾರೆ. ಪ್ರಾಣಿಗಳ ಆರೋಗ್ಯಕ್ಕೆ ಬೇಕಾದ ವ್ಯವಸ್ಥೆ ಮಾತ್ರ ಇಲ್ಲಕವಿತಾ ಯಡ್ರಾಂವೆ ಅಧ್ಯಕ್ಷೆ ಚಿಂಚಲಿ ಪಟ್ಟಣ ಪಂಚಾಯಿತಿ
ರಾಯಬಾಗ ತಾಲ್ಲೂಕಿನಲ್ಲಿ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕುರಾಜಶೇಖರ ಖಣದಾಳೆ ಸದಸ್ಯ ಪಟ್ಟಣ ಪಂಚಾಯಿತಿ ರಾಯಬಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.