ಚಿಕ್ಕೋಡಿ: ವಾಣಿಜ್ಯ ಕೇಂದ್ರವಾದ ಪಟ್ಟಣದಲ್ಲಿ ಎಲ್ಲಿಯೂ ಸಿಸಿಟಿವಿ ಕಣ್ಗಾವಲು ಇಲ್ಲ. ಅಪರಾಧ ಕೃತ್ಯಗಳ ಮೇಲೆ ನಿಗಾ ಇಡಬೇಕಿದ್ದ ಪುರಸಭೆ ಹಾಗೂ ಪೊಲೀಸ್ ಇಲಾಖೆ ಈ ವಿಚಾರೆದಲ್ಲಿ ‘ಕಣ್ಣು’ ಮುಚ್ಚಿಕೊಂಡು ಕುಳಿತಿವೆ. ಪರೋಕ್ಷವಾಗಿ ಇದು ಅಪರಾಧ ಕೃತ್ಯಗಳಿಗೆ ಇಂಬು ನೀಡುತ್ತಿದೆ ಎಂಬುದು ನಾಗರಿಕರ ದೂರು.
ಪಟ್ಟಣದಲ್ಲಿ 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಜಿಲ್ಲಾ, ಉಪ ವಿಭಾಗ ಹಾಗೂ ತಾಲ್ಲೂಕು ಮಟ್ಟದ ನೂರಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ನಿತ್ಯವೂ ಬೇರೆ ಬೇರೆ ಊರುಗಳಿಂದ ಪಟ್ಟಣಕ್ಕೆ ಸಹಸ್ರಾರು ಜನ ಆಗಮಿಸುತ್ತಾರೆ.
ಡಿವೈಎಸ್ಪಿ ಕಚೇರಿ, ಸಿಪಿಐ ಕಚೇರಿ, ಎರಡು ಪೊಲೀಸ್ ಠಾಣೆಗಳಿವೆ. 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೇರಿದಂತೆ 5 ನ್ಯಾಯಾಲಯಗಳು ಇಲ್ಲಿವೆ. ರಾಜ್ಯದ ಗಡಿ ಭಾಗವಾಗಿರುವ ಕಾರಣ ಸಹಜವಾಗಿಯೇ ಇತರೆಡೆಗಿಂತ ಅಪರಾಧ ಪ್ರಕರಣಗಳು ಇಲ್ಲಿ ತುಸು ಹೆಚ್ಚೇ ಎನ್ನಬಹುದು.
ಕಳ್ಳತನ, ಅಪಘಾತ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ಘಟಿಸಿದಾಗ ಪೊಲೀಸರು ಕೃತ್ಯದ ದೃಶ್ಯಕ್ಕಾಗಿ, ಆರೋಪಿಗಳ ಪತ್ತೆಗಾಗಿ ಪರದಾಡುವಂತಾಗಿದೆ. ಘಟನೆ ನಡೆದ ಸ್ಥಳದಲ್ಲಿ ಲಭ್ಯವಿರುವ ಬ್ಯಾಂಕ್, ಮನೆ, ಅಂಗಡಿ ಮುಂತಾದ ಖಾಸಗಿ ವ್ಯಕ್ತಿ ಹಾಗೂ ಸಂಸ್ಥೆಗಳು ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಪೊಲೀಸರದ್ದಾಗಿದೆ.
ಪಟ್ಟಣದಲ್ಲಿ ಸಂಕೇಶ್ವರ– ಜೇವರ್ಗಿ, ನಿಪ್ಪಾಣಿ– ಮುಧೋಳ ಎರಡು ಪ್ರಮುಖ ರಾಜ್ಯ ಹೆದ್ದಾರಿಗಳು ಹಾದು ಹೋಗಿದ್ದರಿಂದ ವಾಹನ ಓಡಾಟ ಹೆಚ್ಚು. ಹೀಗಾಗಿ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅಪಘಾತದ ದೃಶ್ಯ ಪಡೆಯಲು ಪೊಲೀಸರು ಪರದಾಡುತ್ತಿದ್ದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಅಪರಾಧ ಕೃತ್ಯಗಳ ನೈಜತೆ ಪರಿಶೀಲಿಸಿಲು ಸಿಸಿಟಿವಿ ಕ್ಯಾಮೆರಾಗಳು ಇಲ್ಲದ್ದು ಪೊಲೀಸರಿಗೆ ತಲೆನೋವಾಗಿದೆ.
ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಪ್ರಸ್ತಾವ ಇದ್ದು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಪ್ರಾರಂಭಿಸಲಾಗುವುದುಜಗದೀಶ ಈಟಿ ಮುಖ್ಯಾಧಿಕಾರಿ ಪುರಸಭೆ
ಜನದಟ್ಟಣೆಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದ ಕಾರಣ ಅಪರಾಧ ಕೃತ್ಯಗಳು ಹೆಚ್ಚಿವೆ. ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕುಸುದರ್ಶನ ತಮ್ಮಣ್ಣವರ ವಕೀಲ ಚಿಕ್ಕೋಡಿ
ಹೈಟೆಕ್ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ₹15 ಲಕ್ಷ ಅನುದಾನ ಮಂಜೂರಾತಿ ದೊರೆತಿದೆ. ಶೀಘ್ರ ಕ್ಯಾಮೆರಾ ಅಳವಡಿಸಲಾಗುವುದುಪ್ರಿಯಾಂಕಾ ಜಾರಕಿಹೊಳಿ ಸಂಸದೆ ಚಿಕ್ಕೋಡಿ
₹15 ಲಕ್ಷ ಅನುದಾನ ಮಂಜೂರು
ಕೆಲವು ವರ್ಷಗಳ ಹಿಂದೆ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತಾದರೂ ಸಮರ್ಪಕ ನಿರ್ವಹಣೆ ಇಲ್ಲದೇ ಅವುಗಳು ಹಾಳಾಗಿವೆ. ಸಂಸದೆಯಾಗಿ ಆಯ್ಕೆಯಾದ ಪ್ರಾರಂಭದಲ್ಲಿ ಪ್ರಿಯಾಂಕಾ ಜಾರಕಿಹೊಳಿ ಭರವಸೆ ನೀಡಿದ್ದರು. 2024-25ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ₹15 ಲಕ್ಷ ಅನುದಾನ ಮಂಜೂರಾಗಿದೆ. ಪೊಲೀಸ್ ಇಲಾಖೆ ಹಾಗೂ ಪುರಸಭೆ ನೆರವಿನಿಂದ ಪಟ್ಟಣದ ಆಯಕಟ್ಟಿನ 23 ಸ್ಥಳಗಳನ್ನು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಗುರುತಿಸಲಾಗಿದೆ. ಆದರೆ ಕಾಮಗಾರಿ ಮಾತ್ರ ಇನ್ನೂ ಪ್ರಾರಂಭವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.