
ಪ್ರಾತಿನಿಧಿಕ ಚಿತ್ರ
ಬೆಳಗಾವಿ: ರಾಜ್ಯದ ಕ್ರೀಡಾಶಾಲೆ ಮತ್ತು ಕ್ರೀಡಾ ವಸತಿ ನಿಲಯಗಳಲ್ಲಿ ಗುತ್ತಿಗೆ ಆಧಾರದಲ್ಲಿದ್ದ 50 ತರಬೇತುದಾರರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಒಂದೂವರೆ ತಿಂಗಳಾಗಿದೆ. ಇನ್ನೂ ಮರುನೇಮಕವಾಗಿಲ್ಲ. ಇದರಿಂದ ಕ್ರೀಡಾ ವಿದ್ಯಾರ್ಥಿಗಳ ತರಬೇತಿಗೆ ಹಿನ್ನಡೆ ಆಗಿದೆ.
ರಾಜ್ಯದಲ್ಲಿ ಎರಡು ಕ್ರೀಡಾಶಾಲೆ ಮತ್ತು 32 ಕ್ರೀಡಾ ವಸತಿ ನಿಲಯಗಳಿವೆ. ಅಲ್ಲಿನ ವಿದ್ಯಾರ್ಥಿಗಳಿಗೆ ಜುಡೋ, ಕುಸ್ತಿ, ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೆಟ್‌ಬಾಲ್ ಮತ್ತಿತರ ಕ್ರೀಡೆಗಳಿಗೆ ತರಬೇತಿ ನೀಡಲು 50 ತರಬೇತುದಾರರನ್ನು ನೇಮಿಸಿಕೊಳ್ಳಲಾಗಿತ್ತು. ಅವರ ಗುತ್ತಿಗೆ ಅವಧಿಯು ಈ ವರ್ಷ ಸೆಪ್ಟೆಂಬರ್ 30ರಂದು ಕೊನೆಗೊಂಡಿತು. ಹೀಗಾಗಿ ಆಯಾ ಜಿಲ್ಲೆಗಳಲ್ಲಿ ಆಯಾ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ತರಬೇತುದಾರರು ಇಲ್ಲದಂತಾಗಿದೆ.
‘ಒಂದೊಂದು ಕ್ರೀಡೆಗೆ ತರಬೇತಿ ಕೊಡಲು ನಿರ್ದಿಷ್ಟ ತರಬೇತುದಾರರು ಅಗತ್ಯ. ಒಂದು ಕ್ರೀಡೆಯಲ್ಲಿ ಪರಿಣತಿ ಗಳಿಸಿದವರು ಮತ್ತೊಂದು ಕ್ರೀಡೆಗೆ ತರಬೇತಿ ನೀಡಿದರೆ ಪರಿಣಾಮಕಾರಿ ಯಾಗದು’ ಎಂದು ವಿದ್ಯಾರ್ಥಿಗಳು ತಿಳಿಸಿದರು.
ರಾಷ್ಟ್ರಮಟ್ಟದ ಟೂರ್ನಿ ನಡೆದಿವೆ: ‘ಇಡೀ ವರ್ಷಕ್ಕೆ ಹೋಲಿಸಿದರೆ, ಅಕ್ಟೋಬರ್ ಮತ್ತು ನವಂಬರ್‌ನಲ್ಲಿ ಹೆಚ್ಚಿನ ಟೂರ್ನಿ ನಡೆಯುತ್ತವೆ. ಜುಡೋದಲ್ಲಿ ರಾಜ್ಯಮಟ್ಟದ ಟೂರ್ನಿಗಳಲ್ಲಿ ಗೆದ್ದವರು ರಾಷ್ಟ್ರಮಟ್ಟದ ಟೂರ್ನಿಗೆ ತಯಾರಿ ನಡೆಸಿದ್ದಾರೆ. ಕೆಲವರು ಈಗಾಗಲೇ ಟೂರ್ನಿಗೆ ಹೋಗಿದ್ದಾರೆ. ಆದರೆ, ನಮ್ಮನ್ನು ಕರ್ತವ್ಯದಿಂದ ಬಿಡುಗಡೆ ಗೊಳಿಸಿದ ಕಾರಣ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಗುತ್ತಿಲ್ಲ’ ಎಂದು ತರಬೇತುದಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಲವು ವರ್ಷಗಳಿಂದ ನಾವು ವಿದ್ಯಾರ್ಥಿಗಳಿಗೆ ತರಬೇತಿ ಕೊಡುತ್ತಿದ್ದೇವೆ. ಆದರೆ, ಸತತ ಒಂದು ವರ್ಷ ನಮಗೆ ಕರ್ತವ್ಯ ನಿರ್ವಹಿಸಲು ಅವಕಾಶವಿಲ್ಲ. ಒಂದು ವರ್ಷದ ಅವಧಿ ಮುಗಿಯುವ ಮುನ್ನವೇ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಒಂದೆರಡು ದಿನಗಳಲ್ಲಿ ಮರುನೇಮಕ ಮಾಡಿಕೊಳ್ಳುತ್ತಿದ್ದರು. ಈ ಬಾರಿ ಮರುನೇಮಕ ತಡವಾಗಿದೆ. ಇದರಿಂದ ಕ್ರೀಡಾ ಚಟುವಟಿಕೆಗೆ ತೊಂದರೆಯಾಗಿದೆ. ಕುಟುಂಬ ನಿರ್ವಹಣೆಗೂ ಸಮಸ್ಯೆಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.