
ಬೆಳಗಾವಿ: ‘ದೇಶದಲ್ಲಿ ಎಲ್ಲರೂ ತಮ್ಮ ತಮ್ಮ ಧರ್ಮವನ್ನು ಅನುಸರಿಸಬೇಕು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣತೆಯ ಮೂಲಕ ಪ್ರತಿಯೊಬ್ಬರೂ ಸಹಬಾಳ್ವೆ ನಡೆಸಬೇಕು ಎನ್ನುವ ಉದ್ದೇಶದಿಂದ ಧರ್ಮ ಜಾಗೃತಿ ಹಮ್ಮಿಕೊಳ್ಳಲಾಗಿದೆ’ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಸ್ವಾಮೀಜಿ ನುಡಿದರು.
ಯಡೂರು ವೀರಭದ್ರೇಶ್ವರ ದೇವಸ್ಥಾನದ ಮಹಾ ಕುಂಭಾಭಿಷಢಕ, ಲಕ್ಷ ದಿಪೋತ್ಸವ, ಕೃಷ್ಣಾರತಿ ಮತ್ತು ಪುರಂತರ ಮಹಾಮೇಳ ಅಂಗವಾಗಿ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ ಹಾಗೂ ಜಗದ್ಗುರುಗಳ ಸಂಚಾರಿ ಧರ್ಮ ಜಾಗೃತಿ ರಥಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಭಾರತ ದೇಶ ಧರ್ಮ ಪ್ರಧಾನವಾಗಿದೆ. ಇಲ್ಲಿ ಬಾಳಿ ಬದುಕುವ ಮನಿಷ್ಯನಿಗೆ ಧರ್ಮವೇ ಜೀವಾಳವಾಗಿದೆ ಎಂದ ವಿಶ್ವಾಸ ಇಟ್ಟುಕೊಂಡು ಬಂದ ದೇಶ. ಇಲ್ಲಿ ಧರ್ಮ ಜಾಗೃತಿ ಆಗುವುದು ಅವಶ್ಯಕ’ ಎಂದರು.
‘ಯಡೂರ ಕ್ಷೇತ್ರವು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ. ಕಳೆದ 9 ವರ್ಷಗಳಿಂದ ಜೀರ್ಣೋದ್ಧಾರ ಕಾರ್ಯಗಳು ನಡೆದು ರಾಜಗೋಪುರಗಳು ನಿರ್ಮಾಣವಾಗಿ ಸಾಕಷ್ಟು ವಿಶಾಲವಾದ ದೇವಸ್ಥಾನ ನಿರ್ಮಾಣವಾಗಿವೆ. ಅದರ ಉದ್ಘಾಟನೆ ಕಾರ್ಯಕ್ರಮ ಮಾರ್ಚ್ 1 ರಿಂದ 6ರ ವರೆಗೆ ಹಮ್ಮಿಕೊಳ್ಳಲಾಗಿದೆ’ ಎಂದರು.
ಬೆಳಗಾವಿಯ ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ ಮಾತನಾಡಿ, ‘ಶ್ರೀಶೈಲ ಜಗದ್ಗುರುಗಳ ನೇತೃತ್ವದಲ್ಲಿ ಧರ್ಮ ಜಾಗೃತಿ ಯಾತ್ರೆ ಆರಂಭವಾಗಿದೆ. ಜಾತಿ, ಮತ,ಪಂಥಗಳನ್ನು ಹೊಗಲಾಡಿಸಿ ನಾವೆಲ್ಲರೂ ಒಂದು ಎಂದು ನಡೆಯಬೇಕು. ಜನರಲ್ಲಿರುವ ವ್ಯಸನಗಳನ್ನು ದೂರ ಮಾಡಿ ಜನರನ್ನು ಧರ್ಮದ ಕಡೆಗೆ ಕೊಂಡೊಯುವುದು ಎಲ್ಲರ ಆಶಯವಾಗಿದೆ’ ಎಂದರು.
ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಉದ್ಯಮಿ ಬಸವಪ್ರಸಾದ ಜೊಲ್ಲೆ, ಕಟಕೋಳ ಎಂ. ಚಂದರಗಿಯ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಠದ ಶಿವಸಿದ್ದ ಸೋಮೇಶ್ವರ ಸ್ವಾಮೀಜಿ, ನೂಲ ಸುರಗೀಶ್ವರಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.