ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗೆ ‘ಎ’ ಗ್ರೇಡ್

6 ವಿದ್ಯಾರ್ಥಿಗಳಿಂದ ತಲಾ 625 ಅಂಕ ಸಂಪಾದನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 14:13 IST
Last Updated 9 ಆಗಸ್ಟ್ 2021, 14:13 IST

ಬೆಳಗಾವಿ: ಕೋವಿಡ್ ಭೀತಿಯ ನಡುವೆಯೂ ನಡೆದಿದ್ದ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳು ‘ಎ’ ಗ್ರೇಡ್ ಪಡೆದಿವೆ. ಎರಡೂ ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 31,895 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 16,562 ಬಾಲಕರು, 15,333 ಬಾಲಕಿಯರು ಇದ್ದಾರೆ. ಅವರೆಲ್ಲರೂ ಉತ್ತೀರ್ಣರಾಗಿದ್ದಾರೆ. ಬೈಲಹೊಂಗಲ ತಾಲ್ಲೂಕು ಉಡಿಕೇರಿಯ ಸವಿತಾ ಈರಪ್ಪ ಚಿಕ್ಕಮಲ್ಲಿಗವಾಡ 625ಕ್ಕೆ 625 ಅಂಕ ಗಳಿಸಿದ್ದಾರೆ. ಈ ಶೈಕ್ಷಣಿಕ ಜಿಲ್ಲೆಯಲ್ಲಿ ಪೂರ್ಣ ಅಂಕ ಗಳಿಸಿದ ಏಕೈಕ ‍ಪರೀಕ್ಷಾರ್ಥಿ ಎನಿಸಿದ್ದಾರೆ.

426 ಪ್ರೌಢಶಾಲೆಗಳು ‘ಎ’ ಗ್ರೇಡ್, 52 ಪ್ರೌಢಶಾಲೆಗಳು ‘ಬಿ’ ಗ್ರೇಡ್ ಪಡೆದಿವೆ. ಈ ಪೈಕಿ ಬೆಳಗಾವಿ ಗ್ರಾಮೀಣ ವಲಯದಲ್ಲಿ 100, ಬೈಲಹೊಂಗಲದಲ್ಲಿ 67, ಖಾನಾಪುರದಲ್ಲಿ 59, ಸವದತ್ತಿಯಲ್ಲಿ 67, ಚನ್ನಮ್ಮನ ಕಿತ್ತೂರಿನಲ್ಲಿ 26 ಪ್ರೌಢಶಾಲೆಗಳು ‘ಎ’ ಗ್ರೇಡ್ ಗಳಿಸಿವೆ.

ADVERTISEMENT

ಬೆಳಗಾವಿ ನಗರದಲ್ಲಿ 60 ಪ್ರೌಢಶಾಲೆಗಳು ‘ಎ’ ಗ್ರೇಡ್, 51 ಪ್ರೌಢಶಾಲೆಗಳು ‘ಬಿ’ ಗ್ರೇಡ್ ಗಳಿಸಿದ್ದರೆ, ರಾಮದುರ್ಗದಲ್ಲಿ 47 ಪ್ರೌಢಶಾಲೆಗಳು ‘ಎ’ ಹಾಗೂ ಒಂದು ಪ್ರೌಢಶಾಲೆ ‘ಬಿ’ ಗ್ರೇಡ್ ಪಡೆದಿವೆ.

5,528 ಮಂದಿ ‘ಎ ಪ್ಲಸ್’, 11,792 ‘ಎ’, 10,286 ‘ಬಿ’ ಹಾಗೂ 4,289 ವಿದ್ಯಾರ್ಥಿಗಳು ‘ಸಿ’ ಗ್ರೇಡ್ ಪಡೆದಿದ್ದಾರೆ. ಇದರಲ್ಲಿ 9,548 ಮಂದಿ ಸರ್ಕಾರಿ, 14,911 ಅನುದಾನಿತ ಮತ್ತು 7,436 ವಿದ್ಯಾರ್ಥಿಗಳು ಅನುದಾನರಹಿತ ಶಾಲೆಗಳವರಾಗಿದ್ದಾರೆ ಎಂದು ಡಿಡಿಪಿಐ ಡಾ.ಆನಂದ ಪುಂಡಲೀಕ ತಿಳಿಸಿದ್ದಾರೆ.

ಹೋದ ವರ್ಷ ಬೆಳಗಾವಿ ಶೈಕ್ಷಣಿಕ ಜಿಲ್ಲೆಯು 31ನೇ ಸ್ಥಾನ ಗಳಿಸಿ, ‘ಸಿ’ ಶ್ರೇಣಿಯಲ್ಲಿತ್ತು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ 41,396 ವಿದ್ಯಾರ್ಥಿಗಳೂ (ರೆಗ್ಯಲರ್‌/ಫ್ರೆಶ್) ತೇರ್ಗಡೆಯಾಗಿದ್ದಾರೆ. ಐವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. 12,123– ‘ಎ ಪ್ಲಸ್’, 14,544 ‘ಎ’, 12069 ‘ಬಿ’ ಹಾಗೂ 2,660 ವಿದ್ಯಾರ್ಥಿಗಳು ‘ಸಿ’ ಗ್ರೇಡ್ ಪಡೆದಿದ್ದಾರೆ. 556 ಪ್ರೌಢಶಾಲೆಗಳು ಫಲಿತಾಂಶದಲ್ಲಿ ‘ಎ’ ಗ್ರೇಡ್ ಸಂಪಾದಿಸಿವೆ.

ಈ ಸಾಲಿನಲ್ಲಿ ಹೊಸ ಮಾದರಿಯ ಪರೀಕ್ಷೆ ನಡೆದಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಎರಡು ದಿನಗಳಿಗಷ್ಟೆ ಪರೀಕ್ಷೆಯನ್ನು ಮಿತಿಗೊಳಿಸಲಾಗಿತ್ತು. ಈ ಬಾರಿ ಜಿಲ್ಲಾ ಮಟ್ಟದ ರ‍್ಯಾಂಕ್‌ ಪದ್ಧತಿ ಕೈಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.