ADVERTISEMENT

ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ: ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 18:54 IST
Last Updated 28 ಆಗಸ್ಟ್ 2019, 18:54 IST
   

ಬೆಳಗಾವಿ: ‘ಕೇಂದ್ರ ಸರ್ಕಾರವು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನೆರೆ ಬಂದು 20 ದಿನಗಳು ಕಳೆದಿದ್ದರೂ ನಯಾಪೈಸೆ ಅನುದಾನ ಬಿಡುಗಡೆ ಮಾಡದಿರುವುದೇ ಇದಕ್ಕೆ ಸಾಕ್ಷಿ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರವಾಹ ನಿರ್ವಹಣೆಗೆ ಕೇಂದ್ರ ಎಷ್ಟು ಅನುದಾನ ಕೊಟ್ಟಿದೆ ಎನ್ನುವುದನ್ನು ಮುಖ್ಯಮಂತ್ರಿ ಬಹಿರಂಗಪಡಿಸಬೇಕು. ಕೇಂದ್ರದಿಂದ ಇನ್ನೊಂದು ತಂಡ ಬಂದು ‍ಅಧ್ಯಯನ ಮಾಡುವ ಅಗತ್ಯವಿಲ್ಲ. ಈಗಾಗಲೇ ಬಂದು ಹೋಗಿರುವ ತಂಡದ ವರದಿ ಆಧರಿಸಿ ಸದ್ಯಕ್ಕೆ ₹ 5ಸಾವಿರ ಕೋಟಿ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಪ್ರಧಾನಿ ನರೇಂದ್ರ ಮೋದಿ ನೆರೆಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆಯನ್ನಾದರೂ ನಡೆಸಬೇಕಿತ್ತು. ವಿದೇಶಗಳಿಗೆ ಹೋಗಲು ಅವರಿಗೆ ಸಮಯವಿದೆ. ಸಂತ್ರಸ್ತರ ಅಳಲು ಆಲಿಸಲು ಸಮಯವಿಲ್ಲವೇ? ಅವರಿಗೆ ವಿದೇಶಗಳಿಗೆ ಹೋಗಿ ಪ್ರಚಾರ ಪಡೆಯುವ ಹುಚ್ಚಿದೆ. ಬಡವರು, ರೈತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲ. ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಅಮಿತ್ ಶಾ ಗಮನಕ್ಕೆ ತರದೇ ಯಡಿಯೂರಪ್ಪ ಏನಾದರೂ ಮಾಡಲಾಗುತ್ತದೆಯೇ? ನಮ್ಮನ್ನು ಹೈಕಮಾಂಡ್ ಪಕ್ಷ ಎಂದು ಟೀಕಿಸುತ್ತಿದ್ದರು. ಈಗ ಅವರು ಮಾಡುತ್ತಿರುವುದೇನು?’ ಎಂದು ಕೇಳಿದರು.

‘ಬಿಜೆಪಿಯವರು ವಾಮಮಾರ್ಗದಲ್ಲಿ, ಕುದುರೆ ವ್ಯಾಪಾರ ನಡೆಸಿ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ಜನಾದೇಶವಿಲ್ಲ. ಹೀಗಾಗಿ, ಈ ಸರ್ಕಾರ ಅನೈತಿಕ ಶಿಶು’ ಎಂದು ಕುಟುಕಿದರು.

‘ಇಂದಿರಾ ಕ್ಯಾಂಟೀನ್‌ಗಳನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ. ಆದಾಗ್ಯೂ ಮುಚ್ಚಲು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘₹ 400 ಕೋಟಿ ಖರ್ಚಾಗುವ, ಬಡವರಿಗೆ ಅತ್ಯಂತ ಅಗತ್ಯವಾದ ಮತ್ತು ಮಹತ್ವದ ಕಾರ್ಯಕ್ರಮ. ರಾಜ್ಯದ ಬಜೆಟ್‌ ₹2.34 ಲಕ್ಷ ಕೋಟಿ. ಅದರಲ್ಲಿ ₹ 400 ಕೋಟಿ ಕೊಡುವುದು ಕಷ್ಟವಾದರೆ ಅವರಿಗೆ ಬಡವರ ಬಗ್ಗೆ ಯಾವ ಕಾಳಜಿ ಇದೆ? ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಆರ್ಥಿಕ ಸಂಪನ್ಮೂಲ ಇಲ್ಲದಿರಬಹುದು. ಹೀಗಾಗಿ ಸರ್ಕಾರವೇ ಅನುದಾನ ಕೊಡಬೇಕು. ಯೋಜನೆ ನಿಲ್ಲಿಸಬಾರದು’ ಎಂದು ಆಗ್ರಹಿಸಿದರು.

‘ಮಧ್ಯಂತರ ಚುನಾವಣೆ ಬರಬಹುದು’

‘ರಾಜ್ಯ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಅನೈತಿಕ ಶಿಶು. ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿರುವ ಈ ಸರ್ಕಾರಕ್ಕೆ ಸ್ಪಷ್ಟ ಜನಾದೇಶವಿಲ್ಲ. ಈ ಸರ್ಕಾರ ಯಾವ ಕ್ಷಣದಲ್ಲಾದರೂ ಬಿದ್ದು, ಮಧ್ಯಂತರ ಚುನಾವಣೆ ಬರಬಹುದು’ ಎಂದು ಸಿದ್ದರಾಮಯ್ಯ ಹೇಳಿದರು.

‘ನಾವೀಗ ಅಧಿಕೃತ ವಿರೋಧ ಪಕ್ಷದ ಸ್ಥಾನದಲ್ಲಿದ್ದೇವೆ. ನಮ್ಮ ವಿರೋಧಿ ಬಿಜೆಪಿಯೇ ಹೊರತು ಜೆಡಿಎಸ್ ಅಲ್ಲ. ನಾವ್ಯಾರು ಜೆಡಿಎಸ್‌ನವರ ಮೇಲೆ ಹಗೆ ಸಾಧಿಸುತ್ತಿಲ್ಲ. ನಮಗೆ ಕೋಮುವಾದಿ ಶಕ್ತಿ ವಿರೋಧಿಯೇ ಹೊರತು, ಇನ್ನೊಂದು ಜಾತ್ಯತೀತ ಶಕ್ತಿಯಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.